ಮಾನ್ಯ ಸಂಸದರಾದ ನಳಿನ್ ಕುಮಾರ್ ಅವರು ಹೇಳಿಕೆಯಲ್ಲಿ ವಿಜಯಾ ಬ್ಯಾಂಕ್ ವಿಲೀನೀಕರಣದ ಕುರಿತು ಸನ್ಮಾನ್ಯ ವೀರಪ್ಪ ಮೊಯ್ಲಿಯವರು ಮತ್ತು ಚಿದಂಬರಂ ಅವರೇ ಕಾರಣ ಎಂದು ಹೇಳಿರುತ್ತಾರೆ. ಇದು ತಮ್ಮ ವಿಫಲತೆಯನ್ನು ಮುಚ್ಚಿಕೊಳ್ಳಲು ನೀಡಿರುವ ಹೇಳಿಕೆ ಆಗಿರುತ್ತದೆ.

1991ರಲ್ಲಿ ನರಸಿಂಹನ್ ಕಮಿಟಿ, ಭಾರತದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸುದೃಢಗೊಳಿಸಲು ಹಲವಾರು ಶಿಫಾರಸ್ಸುಗಳನ್ನು ಮಾಡಿರುತ್ತಾರೆ. ಇದರಲ್ಲಿ ನಿರ್ದಿಷ್ಟ ಬ್ಯಾಂಕುಗಳನ್ನು ಗುರುತಿಸಲಾಗಿರುವುದಿಲ್ಲ. ಮತ್ತು ಎಲ್ಲಾ ಶಿಫಾರಸ್ಸುಗಳ ಉದ್ದೇಶ ಗ್ರಾಮೀಣ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಬ್ಯಾಂಕುಗಳನ್ನು ಕೇಂದ್ರಿಕೃತಗೊಳಿಸಿ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸುಧೃಡಗೊಳಿಸುವುದಾಗಿತ್ತು ಮತ್ತು ನಷ್ಟದಲ್ಲಿರುವ ಬ್ಯಾಂಕುಗಳನ್ನು ಉಳಿಸುವ, ಪುನರ್ಜಿವ ಕೊಡುವ ಸಂಗತಿಗಳನ್ನು ಒಳಗೊಂಡಿತ್ತು.

ದೇನಾ ಬ್ಯಾಂಕ್ ಕಳೆದ 3 ವರ್ಷಗಳ ಹಿಂದೆ ವಿಪರೀತ ನಷ್ಟವನ್ನು ಅನುಭವಿಸುತ್ತಾ ಬರುತ್ತಿದೆ. ಮತ್ತು ದಕ್ಷಿಣ ಆಫ್ರಿಕಾದಲ್ಲಿನ ವ್ಯವಹಾರಗಳಲ್ಲಿ ನಡೆದ ವಂಚನಾ ಪ್ರಕರಣಗಳಿಂದಾಗಿ ಎ ಕಪ್ಪು ಪಟ್ಟಿಗೆ ಸೇರಿಸಲ್ಪಡುತ್ತದೆ. ತದ ನಂತರ 2018 ರಲ್ಲಿ ಆರ್‍ಬಿಐ ದೇನಾ ಬ್ಯಾಂಕ್ ಯಾವುದೇ ಠೇವಣಿ ಸ್ವೀಕರಿಸದಂತೆ ಆದೇಶಿಸುತ್ತದೆ. ಈ ಎಲ್ಲಾ ಬೆಳವಣಿಗೆ ನಂತರ ದೇನಾ ಬ್ಯಾಂಕ್ ಮುಚ್ಚಿ ಹೋಗುತ್ತದೆ ಎನ್ನುವ ಪರಿಸ್ಥಿತಿಗೆ ಬಂದಾಗ ರಕ್ಷಣಾ ಮಂತ್ರಿ, ರೈಲ್ವೆ ಮಂತ್ರಿ ಮತ್ತು ಅರ್ಥ ಮಂತ್ರಿಗಳ ತಜ್ಞರ ಸಮಿತಿ ದೇನಾ ಬ್ಯಾಂಕ್, ಬರೋಡಾ ಬ್ಯಾಂಕ್ ಮತ್ತು ವಿಜಯಾ ಬ್ಯಾಂಕ್ ವಿಲೀಕರಣಕ್ಕೆ ಶಿಫಾರಸ್ಸು ಮಾಡಿರುತ್ತಾರೆ. 02.01.2019 ರಂದು ಮೂರು ಗಂಟೆಗೆ ಬ್ಯಾಂಕುಗಳ ಬೋರ್ಡು ಆಫ್ ಮೀಟಿಂಗ್ ಆಗುತ್ತದೆ. ನಾಲ್ಕರಿಂದ ಐದು ಗಂಟೆಯ ಒಳಗೆ ಕ್ಯಾಬಿನೆಟ್ ಮೀಟಿಂಗ್ ಮಾಡಿ ಸರಕಾರ ಒಪ್ಪಿಗೆ ಕೊಡುತ್ತದೆ. ಆರು ಕಾಲು ಗಂಟೆಗೆ ನೋಟಿಫಿಕೇಶನ್ ಪ್ರಕಟಗೊಳ್ಳುತ್ತದೆ.

ಸರಕಾರದ ಒಟ್ಟು ಪ್ರಕ್ರಿಯೆಯನ್ನು, ಅದು ಒಂದೇ ದಿನದಲ್ಲಿ ಮುಗಿಸಿರುವ ಹಿನ್ನೆಲೆಯಲ್ಲಿ ಬ್ಯಾಂಕ್ ವಿಲೀಕರಣದ ಉದ್ದೇಶ ದುರುದ್ದೇಶದಿಂದಲೇ ಕೂಡಿದ್ದು ಎಂದು ಸ್ಪಷ್ಟವಾಗುತ್ತದೆ. ಅತ್ಯಂತ ಹೆಚ್ಚು ಎನ್‍ಪಿಎ ಅಕೌಂಟ್ ಹೊಂದಿರುವ ಬರೋಡಾ ಬ್ಯಾಂಕ್ ಸಂಪೂರ್ಣ ನಷ್ಟದಲ್ಲಿರುವ ದೇನಾ ಬ್ಯಾಂಕ್ ಅನ್ನು ಲಾಭದಲ್ಲಿರುವ ವಿಜಯಾ ಬ್ಯಾಂಕ್‍ಗೆ ಸೇರಿಸಿ ಅದರ ಆಡಳಿತವನ್ನು ಬ್ಯಾಂಕ್ ಆಫ್ ಬರೋಡಾಕ್ಕೆ ನೀಡಿರುವುದು ಕಪ್ಪು ಪಟ್ಟಿಗೆ ಸೇರಿಸಲ್ಪಟ್ಟ ಉದ್ಯಮಿಗಳ ರಕ್ಷಣೆಗೆ ಎಂದು ಸಾಬೀತಾಗುತ್ತದೆ. ನರಸಿಂಹನ್ ಕಮಿಟಿಯ ಉದ್ದೇಶದಂತೆ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಕೃಷಿಕರಿಗೆ ಬೆಂಬಲವಾಗಿರುವ ವಿಜಯಾ ಬ್ಯಾಂಕ್‍ನ್ನು ಉಳಿಸಿಕೊಳ್ಳಲು ಆದ್ಯತೆ ನೀಡಬೇಕಾಗಿತ್ತು. ಆದರೆ ಕೆಲವೇ ಮಂದಿ ಉದ್ಯಮಿಗಳನ್ನು ಉಳಿಸುವುದಕ್ಕಾಗಿ ಈ ಬ್ಯಾಂಕ್ ಅನ್ನು ಬಲಿಕೊಡಲಾಯಿತು.

ಕೇಂದ್ರ ಸರಕಾರ ಕಳೆದ 3 ವರುಷಗಳಿಂದ ಯಾವುದೇ ಬ್ಯಾಂಕುಗಳಿಗೆ ಅಧಿಕಾರಿಗಳ – ನೌಕರರ ಪ್ರತಿನಿಧಿಯಾಗಿ ಬ್ಯಾಂಕ್‍ನ ಬೋರ್ಡುಗಳಿಗೆ ನೇಮಕ ಮಾಡಿರುವುದಿಲ್ಲ. ಇದು ಅತ್ಯಂತ ಗಂಭೀರ ಪ್ರಕರಣವಾಗಿದೆ. ಸರಕಾರದ ಅಕ್ರಮಗಳು, ಉದ್ಯಮಿಗಳಿಗೆ ಕಾನೂನು ವಿರೋಧಿಯಾಗಿ ಬ್ಯಾಂಕ್ ಸವಲತ್ತು ನೀಡಲು ವಿಲೀನೀಕರಣ ಎಲ್ಲವೂ ಸಿಬ್ಬಂದಿಗಳಿಗೆ ತಿಳಿಯಬಾರದು ಎಂಬ ದುರುದ್ದೇಶದಿಂದ ಈ ನೇಮಕ ಮಾಡಿರುವುದಿಲ್ಲ. ಈ ಬಗ್ಗೆ ದೆಹಲಿ ಹೈಕೋರ್ಟು ಗಮನ ಸೆಳೆದರೂ ಕೇಂದ್ರ ಸರಕಾರ ನೇಮಕ ಮಾಡಿಲ್ಲ. ದೇಶದ ಸಾರ್ವಜನಿಕ ಸಂಸ್ಥೆಗಳಲ್ಲಿ ಕೇಂದ್ರ ಸರಕಾರ ಯಾವ ರೀತಿ ದುರುಪಯೋಗ ಮಾಡುತ್ತಿದೆ ಅನ್ನುವುದಕ್ಕೆ ಇದೂ ಒಂದು ಉದಾಹರಣೆಯಾಗಿದೆ.

ಈ ಎಲ್ಲಾ ಘಟನೆಗಳ ನಡೆಯುತ್ತಿರುವಾಗ ಮಾನ್ಯ ಲೋಕಸಭಾ ಸದಸ್ಯರು ಇದನ್ನು ಗಂಭೀರವಾಗಿ ಸ್ವೀಕರಿಸಲೇ ಇಲ್ಲ. ಒಬ್ಬ ಎಂ.ಪಿ.ಯಾಗಿ ತಾನೊಬ್ಬನೇ ಇದರ ವಿರುದ್ಧ ಹೋರಾಡಲು ಸಾಧ್ಯವಿಲ್ಲ ಎಂದು ಅನಿಸಿದಾಗ ತಕ್ಷಣ ಕರಾವಳಿ ಭಾಗದ ಸಾರ್ವಜನಿಕರ, ಬ್ಯಾಂಕಿಂಗ್ ಕ್ಷೇತ್ರದ ಗಣ್ಯರ ಸಭೆ ಕರೆಯಬೇಕಾಗಿತ್ತು. ಸರ್ವ ಪಕ್ಷಗಳಿಗೂ ಮಾಹಿತಿ ನೀಡಬೇಕಾಗಿತ್ತು ಮತ್ತು ವಿಜಯ ಬ್ಯಾಂಕ್‍ನ್ನು ಉಳಿಸಿಕೊಳ್ಳಲು ಹೋರಾಟದ ವೇದಿಕೆಯನ್ನು ನಿರ್ಮಾಣ ಮಾಡುವ ಜವಾಬ್ದಾರಿ ಅವರದಾಗಿತ್ತು. ತನ್ನ ಲೋಕಸಭಾ ಅಭ್ಯರ್ಥಿ ಸ್ಥಾನ ಉಳಿಸಿಕೊಳ್ಳಲು ತನ್ನ ಹೈಕಮಾಂಡ್ ಜೊತೆ ಸಂಘರ್ಷಕ್ಕಿಳಿಯದೇ ಕರಾವಳಿಗರ ಶ್ರಮದ ಫಲವಾಗಿದ್ದ ವಿಜಯಾ ಬ್ಯಾಂಕ್ ನ್ನು ಬಲಿಕೊಟ್ಟಿದ್ದಾರೆ. ಈ ಚುನಾವಣೆಯಲ್ಲಿ ಮತದಾರರು ತಕ್ಕ ಉತ್ತರವನ್ನು ನೀಡಲಿದ್ದಾರೆ.

ಶ್ರೀ ಮಹಾಬಲ ಮಾರ್ಲ
ಮಾಜಿ ಮೇಯರ್ ಹಾಗೂ ವಕ್ತಾರರು ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ