ಮಂಗಳೂರು: ಎಡಿಬಿ ದ್ವಿತೀಯ ಹಂತದ ಕಾಮಗಾರಿಯನ್ನು ಕೈಗೊಳ್ಳಲು 715 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು ಇದರ ಕಾಮಗಾರಿಯನ್ನು ಮಳೆಗಾಲ ಕಳೆದ ಕೂಡಲೇ ಆರಂಭಿಸಬೇಕು ಎಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು. ಅವರು ಇಂದು ಎಡಿಬಿ ದ್ವಿತೀಯ ಹಂತದ ಕಾಮಗಾರಿಯ ಬಗ್ಗೆ ಎಡಿಬಿಯ ಜಂಟಿ ಆಡಳಿತ ನಿರ್ದೇಶಕಿ ತನುಶ್ರೀ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿ ಮಾತನಾಡಿದರು.

ಮಂಗಳೂರಿಗೆ ಕುಡಿಯುವ ನೀರು ಮತ್ತು ಒಳಚರಂಡಿ ಯೋಜನೆಗೆ 715 ಕೋಟಿ ರೂಪಾಯಿ ನೀಡಿದ್ದು ಇದನ್ನು ತ್ವರಿತಗತಿಯಲ್ಲಿ ಮಾಡುವಂತೆ ಹೇಳಿದರು. ಸಾಮಾನ್ಯವಾಗಿ ಎಡಿಬಿ ಯೋಜನೆಯ ಮೊದಲ ಹಂತದ ಕಾಮಗಾರಿ ಮುಗಿದ ಮೇಲೆ ಎರಡನೇ ಹಂತದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಅದೇ ಸ್ಥಳಕ್ಕೆ ಕೊಡುವುದಿಲ್ಲ. ಆದರೆ ವಿಶೇಷ ಪ್ರಕರಣವೆಂದು ಪರಿಗಣಿಸಿ ಮಂಗಳೂರನ್ನು ಶಾಸಕ ಜೆ.ಆರ್.ಲೋಬೊ ಅವರ ಒತ್ತಾಯದ ಮೇರೆಗೆ ಮತ್ತು ಉಡುಪಿಯನ್ನು ಪ್ರಮೋದ್ ಮದ್ವರಾಜ್ ಅವರ ಒತ್ತಾಸೆಗೆ ಆಯ್ಕೆ ಮಾಡಿದ್ದಾರೆ.

ಸ್ಥಳದ ಕೊರತೆಯನ್ನು ಪ್ರಸ್ತಾಪಿಸಿದ ಶಾಸಕ ಜೆ.ಆರ್.ಲೋಬೊ ಎಲ್ಲಿ ಸ್ಥಳದ ಸಮಸ್ಯೆ ಇಲ್ಲವೋ ಅಲ್ಲಿ ಕೆಲಸವನ್ನು ಕೂಡಲೇ ಆರಂಭಿಸಿ ಅಗತ್ಯವಿದ್ದರೆ ಭೂಸ್ವಾಧೀನ ಮಾಡಿಸುವ ಕೆಲಸವೂ ಆಗಲಿ. ಆದರೆ ವಿಳಂಭವಾಗದಂತೆ ಎಚ್ಚರಿಕೆ ವಹಿಸುವಂತೆ ಸಲಹೆ ಮಾಡಿದರು. ಇಡೀ ಕಾಮಗಾರಿಯನ್ನು ಎರಡು ಹಂತದಲ್ಲಿ ಕೈಗೆತ್ತಿಕೊಂಡು ನೀರು ಸರಬರಾಜು ಮತ್ತು ಒಳಚರಂಡಿ ಯೋಜನೆಯನ್ನು ಯಾವುದೇ ಆತಂಕವಿಲ್ಲದಂತೆ ಮಾಡಿಮುಗಿಸಬೇಕು. ಜೊತೆಗೆ ಕದ್ರಿಪಾರ್ಕ್ ಗೆ ನೀರು ಸರಬರಾಜು ಮಾಡಲು ಯೋಜನೆಯನ್ನು ಮಾಡುವಂತೆಯೂ ಅಧಿಕಾರಿಗಳಿಗೆ ಸೂಚಿಸಿದರು. ಗುತ್ತಿಗೆದಾರರ ಆಯ್ಕೆ ಪ್ರಕ್ರಿಯಲ್ಲಿ ವಿಳಂಭವಾಗಂತೆಯೂ ನೋಡಿಕೊಳ್ಳುವಂತೆ ಶಾಸಕರು ಸಲಹೆ ಮಾಡಿದರು. ಈ ವೇಳೆ ಎಡಿಬಿ ಯೋಜನೆಯ ಅಧಿಕಾರಿ ಪ್ರಭಾಕರ್ ಶರ್ಮಾ, ನಗರಪಾಲಿಕೆ ಆಯುಕ್ತರಾದ ನಜೀರ್ ಉಪಸ್ಥಿತರಿದ್ದರು.