ಮಂಗಳೂರು: ಮಂಗಳೂರು ನಗರ ಸಮಗ್ರ ಅಭಿವೃದ್ಧಿಗೆ ಸುಮಾರು 2500 ಕೋಟಿ ರೂಪಾಯಿ ಅನುದಾನ ಮಂಜೂರಾಗುವ ನಿರೀಕ್ಷೆ ಇದೆ ಎಂದು ಶಾಸಕ ಜೆ.ರ್.ಲೋಬೊ ಅವರು ಹೇಳಿದರು.

ಅವರು ಜಪ್ಪಿನಮೊಗರು ರಸ್ತೆ ಕಾಂಕ್ರೀಟಿಕರಣಕ್ಕೆ 1.5 ಕೋಟಿ ರೂಪಾಯಿ ಮಂಜೂರಾಗಿದ್ದು ಅದರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.

ಇದರಲ್ಲಿ ರಾಜಕೀಯ ಇಲ್ಲ. ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಂಗಳೂರು ನಗರವನ್ನು ಮಾದರಿ ನಗರವನ್ನಾಗಿ ಮಾಡುವ ದೃಷ್ಟಿಯಿಂದ ಎಡಿಬಿ ಎರಡನೇ ಹಂತದ ಕಾಮಗಾರಿಗೆ 600 ಕೋಟಿ ರೂಪಾಯಿ ಮಂಜೂರು ಮಾಡಿದ್ದಾರೆ ಎಂದರು.

ನನ್ನ ಕ್ಷೇತ್ರವಲ್ಲದಿದ್ದರೂ ನಾನು ಮುತುವರ್ಜಿ ವಹಿಸಿ ಪಂಜಿಮೊಗರುವಿನಲ್ಲಿ ಅಂತಾರಾಷ್ಟ್ರೀಯ ಕ್ರೀಡಾ ಗ್ರಾಮವಾಗಿ ಮಾಡಲು ಸುಮಾರು 1000 ಎಕ್ರೆ ಭೂಮಿಯನ್ನು ಗುರುತಿಸಿದ್ದೇನೆ ಎಂದ ಅವರು ನೇತ್ರಾವತಿ ಸೇತುವೆಯಿಂದ ಕಣ್ಣೂರು ಮಸೀದಿ ವರೆಗೆ ನದಿ ತೀರದಲ್ಲಿ ಚುತುಷ್ಪಥ ರಸ್ತೆಯನ್ನು ನಿರ್ಮಿಸಲು ಉದ್ದೇಶಿಸಿದ್ದು ಬೆಂಗಳೂರಿನಿಂದ ಅಧಿಕಾರಿಗಳ ತಂಡ ಬಂದು ಅಧ್ಯಯನ ನಡೆಸಿದೆ. ಇಲ್ಲಿ ಸುಮಾರು 350 ರಿಂದ 400 ಕೋಟಿ ರೂಪಾಯಿ ಹೂಡಿಕೆ ಆಗಲಿದೆ. ಇದನ್ನು ಖಾಸಗಿ ಮತ್ತು ಸರ್ಕಾರಿ ಒಡೆತನದಲ್ಲಿ ನಿರ್ಮಿಸಲಾಗುವುದು. ಇದು ಮಂಜೂರಾದರೆ ಜಪ್ಪಿನಮೊಗರು ಬೆಳೆಯುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು.

ಮಂಗಳೂರು ಹಳೆ ಬಂದರು ಮತ್ತು ನವಮಂಗಳೂರು ಬಂದರಿಗೆ ಸಂಪರ್ಕ ಸಾಧಿಸುವ ಯೋಜನೆಯೂ ಇದೆ ಎಂದು ನುಡಿದ ಶಾಸಕ ಜೆ.ಆರ್.ಲೋಬೊ ಅವರು ಜನರ ಸಹಕಾರವಿದ್ದರೆ ಮಾತ್ರ ಇದೆಲ್ಲವನ್ನೂ ಸಾಧಿಸಲು ಸಾಧ್ಯವಿದೆ ಎಂದರು.

ಜಪ್ಪಿನಮೊಗರು ನಗರವನ್ನು ಅಭಿವೃದ್ಧಿ ಪಡಿಸಲು ಮೊದಲ ಕಂತಾಗಿ 1.5 ಕೋಟಿ ರೂಪಾಯಿ ಮಂಜೂರಾಗಿದ್ದು ಜನರು ಆಸಕ್ತಿ ವಹಿಸಿ ಜಾಗ ಬಿಟ್ಟುಕೊಟ್ಟರೆ ಇನ್ನೂ ಹೆಚ್ಚಿನ ಅನುದಾನವನ್ನು ಮಂಜೂರು ಮಾಡಿಸಿ ಇದನ್ನು ಮಾದರಿ ನಗರವನ್ನಾಗಿ ಮಾಡುವ ಸಂಕಲ್ಪವಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಕಾರ್ಪೊರೇಟರ್ ಸುರೇಂದ್ರ, ಪ್ರವೀಣಚಂದ್ರ ಆಳ್ವ, ಸದಾನಂದ ಆಳ್ವ, ಮಂಗಳೂರು ತಾಲೂಕು ಭೂನ್ಯಾಯ ಮಂಡಳಿ ಸದಸ್ಯ ಡೆನ್ನೀಸ್ ಡಿಸಿಲ್ವಾ, ಅರ್ಬರ್ಟ್ ಡಿಸೋಜಾ,ಅನಿಲ್ ಶೆಟ್ಟಿ, ದಿನೇಶ್ ಅಂಚನ್, ಪ್ರಕಾಶ್ ಶೆಟ್ಟಿ ಮುಂತಾದವರಿದ್ದರು.