ಮಂಗಳೂರು: ಬಿರ್ಕನಕಟ್ಟೆಯಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಿಸಲು ಉದ್ದೇಶಿಸಲಾಗಿದ್ದು ಈಗ ಇರುವ ಮಾರುಕಟ್ಟೆ ಅಂಗಡಿಗಳನ್ನು ತಾತ್ಕಾಲಿಕವಾಗಿ ಸ್ಥಳಾಂತರಗೊಳಿಸಿ ಮಾರುಕಟ್ಟೆ ಕೆಲಸವನ್ನು ಪ್ರಾರಂಭಿಸಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದರು. ಅವರು ಬಿರ್ಕನಕಟ್ಟೆ ಮಾರುಕಟ್ಟೆ ಪ್ರದೇಶಕ್ಕೆ ಭೇಟಿ ಕೊಟ್ಟು ಸ್ಥಳ ಪರಿಶೀಲನೆ ಮಾಡಿ ಮಾತನಾಡುತ್ತಿದ್ದರು. ಈಗ ಇರುವ ವಾರದ ಸಂತೆಯನ್ನು ಕೂಡಾ ಸ್ಥಳಾಂತರಗೊಳಿಸಲಾಗುವುದು ಎಂದರು. ಇಲ್ಲಿ ಡ್ರೈನೇಜ್ ನೀರು ಹರಿಯುತ್ತಿದ್ದು ಇದಕ್ಕೆ ವ್ಯವಸ್ಥಿತವಾಗಿ ಪರಿಹಾರ ನೀಡಬೇಕು. ಮಳೆ ನೀರು ಮತ್ತು ಮಲಿನ ನೀರು ಸರಾಗವಾಗಿ ಹರಿದು ಹೋಗಲು ಪರ್ಯಾಯ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸುಸಜ್ಜಿತ ಮಾರುಕಟ್ಟೆ ಆದಲ್ಲಿ ಕೋಳಿಮಾರಾಟ, ಮಾಂಸ ಮತ್ತು ಮೀನು ಮಾರಾಟಕ್ಕೆ ಪ್ರತ್ಯೇಕ ಅಂಗಡಿಗಳನ್ನು ಕಟ್ಟಿಕೊಡಲಾಗುವುದು. ಅಂತೆಯೇ ವಾರದ ಸಂತೆಗೂ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದ ಅವರು ಇದಕ್ಕೆ ಅಂಗಡಿ ಮಾಲೀಕರು ಸಹಕರಿಸುವಂತೆ ಲೋಬೊ ಮನವಿ ಮಾಡಿದರು. ಕೂಡಲೇ ಅಧಿಕಾರಿಗಳು ಮಾರುಕಟ್ಟೆಯ ಬಗ್ಗೆ ಸರ್ವೇ ಮಾಡಬೇಕು. ಇಲ್ಲಿ ನ್ಯಾಷನಲ್ ಹೈ ವೇ ಬರುತ್ತದೆ. ಅದರ ಇದರ ಸರ್ವೇ ಮಾಡಿ. ನಿರ್ಮಾಣ ಮಾಡಬೇಕಾಗಿರುವ ಅಂಗಡಿಗಳ ಬಗ್ಗೆಯೂ ಅಂದಾಜು ಪತ್ರ ತಯಾರಿಸುವಂತೆ ಹೇಳಿದ ಶಾಸಕ ಜೆ.ಆರ್.ಲೋಬೊ ಇನ್ನೊಂದು ವಾರದಲ್ಲಿ ಪುನ ಇಲ್ಲಿಗೆ ಬಂದು ಸ್ಥಳ ಪರಿಶೀಲನೆ ಮಾಡುವುದಾಗಿ ಹೇಳಿದರು. ಶಾಸಕರೊಂದಿಗೆ ಮಾಜಿ ಮೇಯರ್ ಅಬ್ದುಲ್ ಅಜೀಜ್,, ಕೆ ಎಸ್ ಆರ್ ಟಿಸಿ ನಿರ್ದೇಶಕ ಟಿ.ಕೆ.ಸುಧೀರ್, ಡೆನ್ಸಿಲ್, ನೆಲ್ಸನ್, ಸ್ಟ್ಯಾನಿ ಅರ್ಲಾರಿಸ್, ಅಲ್ವಿನ್ ಪಾಯಸ್, ಮಂಗಳೂರು ಮಹಾನಗರ ಪಾಲಿಕೆ ಇಂಜಿನಿಯರ್ ಗಳು ಉಅಪಸ್ಥಿತರಿದ್ದರು.

ಬಿರ್ಕನಕಟ್ಟೆಯಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣ: ಶಾಸಕ ಜೆ.ಆರ್.ಲೋಬೊ