ಮಂಗಳೂರು: ಬಜಾಲ್- ಕಲ್ಲಗುಡ್ಡೆ ರಸ್ತೆಯನ್ನು ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ 30 ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು.

ಅವರು ಬಜಾಲ್-ಕಲ್ಲಗುಡ್ಡೆಯಲ್ಲಿ 30 ಲಕ್ಷ ರೂಪಾಯಿ ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.

ಮುಖ್ಯಮಂತ್ರಿಗಳು ಈ ರಸ್ತೆಯನ್ನು ಅಭಿವೃದ್ಧಿಗೊಳಿಸಲು ಅನುದಾನ ನೀಡಿದ್ದಾರೆ. ಈ ರಸ್ತೆಯನ್ನು ಮಾದರಿ ರಸ್ತೆಯನ್ನಾಗಿ ಮಾಡಬೇಕು ಎಂದು ಶಾಸಕರು ನುಡಿದರು.

ಮಂಗಳೂರನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಮುಖ್ಯಮಂತ್ರಿಗಳು ಆಸಕ್ತರಾಗಿದ್ದಾರೆ. ಅವರ ಇಚ್ಚೆಯಂತೆ ನಾವು ಜನಪ್ರತಿನಿಧಿಗಳು ಕೆಲಸ ಮಾಡಿ ಮಂಗಳೂರು ನಗರವನ್ನು ಮಾದರಿ ನಗರವನ್ನಾಗಿ ಅಭಿವೃದ್ಧಿ ಪಡಿಸುವ ಗುರುತರ ಹೊಣೆಗಾರಿಕೆ ನಿರ್ವಹಿಸಬೇಕು ಎಂದರು.

ಸಮಾರಂಭದಲ್ಲಿ ಮೇಯರ್ ಕವಿತಾ ಸನಿಲ್, ಉಪಮೇಯರ್ ರಜನೀಶ್ ಕಾಪಿಕಾಡ್, ಮುಖ್ಯಸಚೇತಕ ಎಂ.ಶಶಿಧರ್ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷೆ ಸಬಿತಾ ಮಿಸ್ಕಿತ್, ಕಾರ್ಪೊರೇಟರ್ ಗಳಾದ ರಾಧಾಕೃಷ್ಣ, ಸುಮಯ್ಯ, ಮಂಗಳೂರು ತಾಲೂಕು ಭೂನ್ಯಾಯ ಮಂಡಳಿ ಸದಸ್ಯ ಡೆನ್ನೀಸ್ ಡಿಸಿಲ್ವಾ, ಮಂಗಳೂರು ಮಹಾನಗರ ಪಾಲಿಕೆ ಉಪಆಯುಕ್ತ (ಅಭಿವೃದ್ಧಿ) ಕೆ.ಎಸ್.ಲಿಂಗೇಗೌಡ ಹಾಗೂ ಗುತ್ತಿಗೆದಾರ ಭಂಡಾರ್ಕರ್ ಮುಂತಾದವರು ಉಪಸ್ಥಿತರಿದ್ದರು.