ಮಂಗಳೂರು: ನಗರಗಳಲ್ಲಿ ಘನ ತ್ಯಾಜ್ಯ ನಿರ್ವಣೆ, ಶುಚಿತ್ವ ಒಂದು ರಾಕ್ಷಸ ಸ್ವಭಾವದ ಸಮಸ್ಯೆಯಾಗಿ ಪರಿಣಮಿಸಿದೆ.ಘನ ತ್ಯಾಜ್ಯ ಸಮಸ್ಯೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಈ ವಿಷಯದ ಕುರಿತು ಗಂಭೀರವಾಗಿ ಆಲೋಚಿಸಬೇಕಾಗಿದೆ ಎಂದು ಶಾಸಕ ಜೆ.ಆರ್.ಲೋಬೊ ಕಳವಳ ವ್ಯಕ್ತಪಡಿಸಿದರು.

ಅವರು ವಿಧಾನ ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ಕುರಿತು ಮಾತನಾಡುತ್ತ ಈ ವಿಷಯ ತಿಳಿಸಿದರು. ಈ ಘನ ತ್ಯಾಜ್ಯ ಸಮಸ್ಯೆಯನ್ನು ನಿವಾರಣೆ ಮಾಡುವ ಅಗತ್ಯವನ್ನು ಒತ್ತಿಹೇಳಿದ ಅವರು ಸಂಸ್ಕರಣೆ ಸಮಸ್ಯೆ, ಲ್ಯಾಂಡ್ ಫಿಲ್ ಆಗಲಿ ಅಥವಾ ಈ ಘನತ್ಯಾಜ್ಯದ ಬಗ್ಗೆ ಸಮಗ್ರ ಚಿಂತನೆಯನ್ನು ಮಾಡುವ ಅಗತ್ಯವಿದೆ ಎಂದರು.

ಅವರು ಒಳಚರಂಡಿ ಸಮಸ್ಯೆಯನ್ನು ಪ್ರಸ್ತಾಪಿಸಿ ನಗರಗಳಲ್ಲಿ ಒಳಚರಂಡಿ ಸಮಸ್ಯೆ ಕೂಡಾ ಇದ್ದು ಈ ಬಗ್ಗೆ ಒಳಚರಂಡಿ ಮಾಡುವುದರ ಜೊತೆಯಲ್ಲಿ ನಿರ್ವಹಣೆಯು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಒಳಚರಂಡಿಯನ್ನು ಸರಿಯಾಗಿ ನಿರ್ವಹಣೆ ಮಾಡದೆ ನಗರವಾಸಿಗಳಿಗೂ ತೊಂದರೆ ಮತ್ತು ಅಂತರ್ಜಲದ ಮೂಲಗಳಿಗೂ ತೊಂದರೆಯಾಗುತ್ತಿದೆ ಎಂದರು.

ಆಳು ಗುಂಡಿಗಳನ್ನು ಕ್ಲೀನ್ ಮಾಡುವುದಕ್ಕೆ ನಾವು ಯಂತ್ರಗಳನ್ನು ಉಪಯೋಗ ಮಾಡುವುದಿಲ್ಲ. ಮನುಷ್ಯರನ್ನು ಇಳಿಸುತ್ತಿದ್ದೇವೆ. ಇದರ ಬಗ್ಗೆ ನಾವು ಒಂದು ಚಿಂತನೆ ಮಾಡಿ ಯಾವ ರೀತಿಯಲ್ಲಿ ಒಳಚರಂಡಿ ನಿರ್ವಹಣೆ ಮಾಡಬೇಕು ಎಂಬ ಬಗ್ಗೆಯೂ ನಿರ್ಧರಿಸಬೇಕಾಗಿದೆ ಎಂದು ಶಾಸಕ ಜೆ.ಆರ್.ಲೋಬೊ ಮನವಿ ಮಾಡಿದರು.

ವೈಜ್ನಾನಿಕ ರೀತಿಯಲ್ಲಿ ಕಸಾಯಿ ಖಾನೆ ನಿರ್ವಹಣೆ ಮಾಡುವ ಕುರಿತು ಚಿಂತನೆ ಮಾಡಬೇಕಾಗಿದೆ. ಇದು ಎಲ್ಲಾ ನಗರಗಳಿಗೂ ಅನ್ವಯಿಸುತ್ತದೆ ಎಂದ ಅವರು ಹೆಚ್ಚಿನ ನಗರಗಳಲ್ಲಿ ಸಾರ್ವಜನಿಕ ಶೌಚಾಲಯಗಳ ಕೊರತೆ ಕಂಡುಬಂದಿದೆ. ಮಹಿಳೆಯರಿಗೆ ಮತ್ತು ಸಾರ್ವಜನಿಕರಿಗೆ ಸರಿಯಾದ ಪ್ರಮಾಣದಲ್ಲಿ ಶೌಚಾಲಯಗಳನ್ನು ನಿರ್ಮಿಸಿಕೊಡಬೇಕಾಗಿದೆ ಎಂದು ಒತ್ತಾಯಿಸಿದರು.