ಮಂಗಳೂರು: ಬಂಟವಾಳದಲ್ಲಿ ಮುಸ್ಲಿಂ ಸಮುದಾಯದವರ ಮನೆಯಲ್ಲಿ ಮರ್ಡರ್ ಕೇಸ್ ತನಿಖೆಮಾಡುವ ವೇಳೆ ಪೊಲೀಸರು ಧಾರ್ಮಿಕ ಗ್ರಂಥವನ್ನು ಅಗೌರವದಿಂದ ನೋಡಿದಾರೆ ಎಂಬ ಆರೋಪ ಕೇಳಿಬಂದಿದ್ದು ಈ ಬಗ್ಗೆ ಕೂಲಂಕಷ ತನಿಖೆ ನಡೆಸಬೇಕು ಎಂದು ಶಾಸಕ ಜೆ.ಆರ್.ಲೋಬೊ ಅವರು ಒತ್ತಾಯ ಮಾಡಿದರು.

ಅವರು ಈ ಬಗ್ಗೆ ಇಂದು ಸುದ್ದಿಗೋಷ್ಟಿ ನಡೆಸಿ ಈ ಆರೋಪದ ಬಗ್ಗೆ ನ್ಯಾಯಯುತ ತನಿಖೆ ಆಗಬೇಕು. ಈ ಕುರಿತು ಉನ್ನತ ಮಟ್ಟದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ತಾವು ಇಂದೇ ಪತ್ರ ಬರೆಯುದಾಗಿ ಹೇಳಿದರು. ಯಾವುದೇ ಧರ್ಮದ ಗ್ರಂಥದ ಬಗ್ಗೆ ಅಗೌರವದಿಂದ ನೋಡಬಾರದು. ಎಲ್ಲಾ ಧರ್ಮಗಳು ಒಂದೇ ಆದರೆ ಆಚರಣೆಯ ವಿಧಾನ ಬೇರೆ ರೀತಿ ಇರುತ್ತದೆ. ನಮಗೆ ಎಲ್ಲಾ ಧರ್ಮಗಳ ಬಗ್ಗೆಯೂ ಗೌರವದ ಭಾವನೆ ಇರಬೇಕು ಎಂದು ಹೇಳಿದ ಅವರು ಈಗಾಗಲೇ ಪೊಲೀಸ್ ಅಧಿಕಾರಿಗಳು ಈ ಘಟನೆಯ ಬಗ್ಗೆ ಉತ್ತರ ನೀಡಿದ್ದರೂ ಸಾಮಾಜಿಕ ಜಾಲ ತಾಣಗಳಲ್ಲಿ ಅಪಪ್ರಚಾರ ಬರುತ್ತಿದೆ. ಈ ಬಗ್ಗೆ ಸರಿಯಾದ ರೀತಿಯಲ್ಲಿ ಸತ್ಯ ಏನು ಎಂಬುದು ಜನರಿಗೆ ಅರಿವಾಗಬೇಕು. ಇಂಥ ಘಟನೆ ನಡೆಯದಿದ್ದರೆ ಖಂಡಿತಕ್ಕೂ ಸ್ವಾಗತಾರ್ಹ. ಒಂದು ವೇಳೆ ಘಟನೆ ನಡೆದಿದ್ದರೆ ತಪ್ಪಿತಸ್ಥರ ಮೇಲೆ ನಿರ್ಧಾಕ್ಷಣ್ಯ ಕ್ರಮ ಜರಗಿಸಬೇಕು ಎಂದು ಅವರು ಒತ್ತಾಯಿಸಿದರು.

ಸಾಮರಸ್ಯ ಬಹಳ ಮುಖ್ಯವಾಗಿದೆ. ಜಿಲ್ಲೆ ಅಭಿವೃದ್ಧಿಯಾಗಬೇಕು. ಬಂಡವಾಳ ಹೂಡಿಕೆ ಸಾಕಷ್ಟು ಪ್ರಮಾಣದಲ್ಲಿ ಆಗಬೇಕು. ಈ ಎಲ್ಲಾ ಅನಿರ್ವಾಯತೆಯನ್ನು ಗಮನದಲ್ಲಿಟ್ಟುಕೊಂಡು ಸಾಮರಸ್ಯವನ್ನು ಕಾಪಾಡಬೇಕು ಎಂದೂ ಲೋಬೊ ಅವರು ಅಭಿಪ್ರಾಯ ಪಟ್ಟರು.

ಕಾಂಗ್ರೆಸ್ ಪಕ್ಷ ಸಾಮರಸ್ಯವನ್ನು ಹೆಚ್ಚುಮಾಡಲು ಬದ್ಧವಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಈ ತಿಂಗಳ 12ರಂದು ಫರಂಗಿಪೇಟೆಯಿಂದ ಮಾಣಿಯತನಕ ಕಾಲುನಡಿಗೆ ಜಾಥವನ್ನು ನಡೆಸಲಿದೆ. ಇದರಲ್ಲಿ ಕಾಂಗ್ರೆಸ್ ನಾಯಕರು ಭಾಗವಹಿಸುವರು ಎಂದು ಶಾಸಕ ಜೆ.ಆರ್.ಲೋಬೊ ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಬೂಬಕರ್,ಡಿಎಂ. ಅಸ್ಲಾಂ, ಲ್ಯಾನ್ಸಿ ಲಾರ್ಟ್ ಪಿಂಟೊ, ಮೋಹನ್ ಶೆಟ್ಟಿ. ಅಶ್ರಫ ಬಜಾಲ್, ಟಿ.ಕೆ.ಸುಧೀರ್ ಮುಂತಾದವರು ಉಪಸ್ಥಿತರಿದ್ದರು.