ಬಹಳಷ್ಟು ವರ್ಷಗಳಿಂದ ಬೇಡಿಕೆಯಿರುವ ನಗರದ ಕುಲಶೇಖರ ಕಣ್ಣಗುಡ್ಡೆಯ ರಸ್ತೆಯ ಅಭಿವೃದ್ಧಿಗೆ ತಾ|| 04.02.2018ರಂದು ಬೆಳಿಗ್ಗೆ 11.00 ಗಂಟೆಗೆ ಗುದ್ದಲಿಪೂಜೆ ನೆರವೇರಲಿದೆ. ಸುಮಾರು ರೂ.85 ಲಕ್ಷ ಅನುದಾನ ರಾಜ್ಯದ ಮುಖ್ಯಮಂತ್ರಿಗಳ ರೂ.100 ಕೋಟಿಗಳ ನಿಧಿಯಿಂದ ದೊರೆತಿದೆ. ಕುಲಶೇಖರ – ಕಣ್ಣಗುಡ್ಡೆ ರಸ್ತೆಯು ರೈಲ್ವೆ ಇಲಾಖೆಯ ಪ್ರದೇಶವಾಗಿದ್ದರಿಂದ ಇದನ್ನು ಅಭಿವೃದ್ಧಿಪಡಿಸಲು ಅವರ ಅನುಮತಿ ಬೇಕಿತ್ತು. ಈಗ ಈ ರಸ್ತೆಯನ್ನು ಅಭಿವೃದ್ಧಿಗೊಳಿಸಲು ರೈಲ್ವೆ ಇಲಾಖೆ ಅನುಮತಿ ನೀಡಿದೆ. ಆದುದರಿಂದ ಈ ಕಾಮಗಾರಿಯನ್ನು ಕೈಗೆತ್ತಿಗೊಂಡಿದ್ದೇವೆ. ಕುಲಶೇಖರ ರಸ್ತೆಯು ರಾಷ್ಟ್ರೀಯ ಹೆದ್ದಾರಿ 17 ಆಗಿದ್ದು, ಇಲ್ಲಿಂದ ಕಣ್ಣೂರು ಕೋಡಿಕಲ್ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಲಿಂಕ್ ಆಗಲಿದ್ದು, ಇದರ ಅಭಿವೃದ್ಧಿಗೆ ರೂ.10 ಕೋಟಿ ಮಂಜೂರಾಗಿದೆ. ಈ ರಸ್ತೆಯು ಅಭಿವೃದ್ಧಿಯಾದರೆ ಕುಲಶೇಖರ ಭಾಗದಲ್ಲಿ ವಾಸಿಸುತ್ತಿರುವ ಜನರಿಗೆ ಬೆಂಗಳೂರು ಭಾಗಕ್ಕೆ ಹೋಗಬೇಕಾದರೆ ಈ ರಸ್ತೆಯನ್ನು ಉಪಯೋಗಿಸಿದರೆ ಸಮಯದ ಅವಕಾಶವನ್ನು ಕಡಿಮೆ ಮಾಡಬಹುದು. ಇದರಿಂದ ಸಾರ್ವಜನಿಕರಿಗೆ ಬಹಳಷ್ಟು ಪ್ರಯೋಜನಕಾರಿಯಾಗಲಿದೆ ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ.ಜೆ.ಆರ್ ಲೋಬೊರವರು ಪತ್ರಿಕೆಗೆ ತಿಳಿಸಿರುತ್ತಾರೆ.