Home » Website » News from jrlobo's Office » ಕಾರ್‍ಸ್ಟ್ರೀಟ್ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಭರ್ಜರಿ ಪಾದಯಾತ್ರೆ
ಕಾರ್‍ಸ್ಟ್ರೀಟ್ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಭರ್ಜರಿ ಪಾದಯಾತ್ರೆ
Image from post regarding ಕಾರ್‍ಸ್ಟ್ರೀಟ್ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಭರ್ಜರಿ ಪಾದಯಾತ್ರೆ

ಕಾರ್‍ಸ್ಟ್ರೀಟ್ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಭರ್ಜರಿ ಪಾದಯಾತ್ರೆ

ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಯುಕ್ತ ಕಾಂಗ್ರೆಸ್ ಪಕ್ಷದ ವತಿಯಿಂದ ಬೃಹತ್ ಪಾದಯಾತ್ರೆಯು ಇಂದು ತಾ: 07.05.2018ರಂದು ಸಂಜೆ ನಗರದ ಕಾರ್‍ಸ್ಟ್ರೀಟ್ ಪರಿಸರದಲ್ಲಿ ನಡೆಯಿತು. ಮಂಗಳೂರ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀ. ಜೆ.ಆರ್.ಲೋಬೊ ರವರು ಪಾದಯಾತ್ರೆಯ ನೇತೃತ್ವವನ್ನು ವಹಿಸಿದ್ದರು. ಸುಮಾರು 2000ಕ್ಕೂ ಅಧಿಕ ಮಂದಿ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಈ ಪಾದಯಾತ್ರೆಯು ಕಾರ್‍ಸ್ಟ್ರೀಟ್ ಶ್ರೀ. ವೆಂಕಟರಮಣ ದೇವಸ್ಥಾನದ ಬಳಿಯಿಂದ ಹೊರಟು ನವಭಾರತ ವೃತ್ತ, ಲೋವರ್ ಕಾರ್‍ಸ್ಟ್ರೀಟ್, ನ್ಯೂಚಿತ್ರ ಟಾಕೀಸ್ ಕಟ್ಟೆ, ಹೂ ಮಾರುಕಟ್ಟೆ ಮೂಲಕ ಮರಳಿ ವೆಂಕಟ್ರಮಣ ದೇವಸ್ಥಾನದ ಬಳಿ ಆಗಮಿಸಿತು. ಬಳಿಕ ನಡೆದ ಬಹಿರಂಗ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೊ ರವರು ಮಾತನಾಡುತ್ತಾ, ಪಾದಯಾತ್ರೆಯು ಸಾಗುವಾಗ ದಾರಿಯುದ್ದಕ್ಕೂ ಜನರು ತೋರಿಸಿದ ಪ್ರೀತಿ, ವಿಶ್ವಾಸ, ಸ್ಪಂದನೆ ನನಗೆ ನಿಜವಾಗಿಯೂ ಇನ್ನಷ್ಟು ಉತ್ಸಾಹವನ್ನು ತಂದುಕೊಟ್ಟಿದೆ. ಕಾರ್‍ಸ್ಟ್ರೀಟ್ ರಸ್ತೆ ಪ್ರದೇಶ ನಗರದ ಒಂದು ವಾಣಿಜ್ಯ ಕೇಂದ್ರವಾಗಿದೆ. ದಿನನಿತ್ಯ ವಾಣಿಜ್ಯ ವಹಿವಾಟುಗಳು ನಡೆಯುವಂಥ ಸ್ಥಳವಾಗಿದೆ. ಇಲ್ಲಿಂದಲೇ ಮಂಗಳೂರಿಗೆ ರಾಜ್ಯದಲ್ಲಿಯೇ ಒಂದು ಮಾದರಿ ನಗರ ಎಂಬ ಹೆಸರಿದೆ.

ಮಂಗಳೂರು ವಿದ್ಯಾವಂತರ ನಗರ, ಪ್ರತಿಯೊಂದು ಮನೆಯಲ್ಲಿಯೂ ಮಕ್ಕಳು ಉನ್ನತ ಶಿಕ್ಷಣವನ್ನು ಕಲಿತು ಮಂಗಳೂರಿನಲ್ಲಿ ಉದ್ಯೋಗ ಸಿಗದೆ ಪರದೇಶಕ್ಕೆ ತೆರಳುತ್ತಾರೆ. ಮನೆಯಲ್ಲಿ ತಂದೆ ತಾಯಂದಿರು ಮಾತ್ರ ಇರುತ್ತಾರೆ. ನಿರುದ್ಯೋಗವನ್ನು ಹೊಗಲಾಡಿಸಲು ಮಂಗಳೂರಿನಲ್ಲಿ ಐಟಿ ಕ್ಷೇತ್ರ, ಪ್ರವಾಸೋದ್ಯಮ ಮತ್ತು ಇತರ ಕ್ಷೇತ್ರಗಳು ಅಭಿವೃದ್ಧಿಯಾಗಬೇಕು. ಆಗ ಮಾತ್ರವೇ ಇಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ. ಇದಕ್ಕೆ ಪೂರಕವಾಗಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬೃಹತ್ ಬಂದರು, ಅತ್ಯುತ್ತಮ ರಸ್ತೆ ಸಂಪರ್ಕಗಳಿದ್ದು, ಬಂಡವಾಳ ಹೂಡಿಕೆಗೆ ಪೂರಕವಾದ ವಾತಾವರಣವಿರುತ್ತದೆ. ಆ ಮೂಲಕ ಬಂಡವಾಳ ಹೂಡಿಕೆಯನ್ನು ಆಕರ್ಷಿಸಿ ಇಲ್ಲಿನ ಯುವಕರಿಗೆ ಉದ್ಯೋಗ ಕಲ್ಪಿಸುವುದು ನಮ್ಮ ಮುಂದಿನ ಯೋಜನೆಯಾಗಿರುತ್ತದೆ. ನಗರದಲ್ಲಿ ಶಾಂತಿ ಸಾಮರಸ್ಯ ಅಗತ್ಯವಾಗಿದ್ದು ಇದಕ್ಕೆ ಸಾರ್ವಜನಿಕರ ಸಹಕಾರ ಬೇಕು. ಕಳೆದ 5 ವರ್ಷಗಳಲ್ಲಿ ಮಂಗಳೂರು ನಗರಕ್ಕೆ ಸಹಸ್ರಾರು ಕೋಟಿ ಅನುದಾನ ಬಂದಿರುತ್ತದೆ. ಕಳೆದ 20 ವರ್ಷಗಳಲ್ಲಿ ಪ್ರತಿಪಕ್ಷದ ಶಾಸಕರು ಮಾಡದಂತಹ ಕೆಲಸ ಕಾರ್ಯಗಳು, ನಾನು ಶಾಸಕನಾದ 5 ವರ್ಷಗಳಲ್ಲಿ ಆಗಿದೆ. ಮಂಗಳೂರಿನ ಮುಖ್ಯರಸ್ತೆಗಳ ಅಗಲೀಕರಣ, ಅಭಿವೃದ್ಧಿ, ಪೂಟ್‍ಪಾತ್ ನಿರ್ಮಾಣ, ಕುಡಿಯುವ ನೀರಿನ ಯೋಜನೆ, ಘನತ್ಯಾಜ್ಯ ನಿರ್ವಹಣೆ, ಮಾರುಕಟ್ಟೆಗಳ ಅಭಿವೃದ್ಧಿ, ಎಡಿಬಿ ಯೋಜನೆ, ಪಾರ್ಕ್‍ಗಳ ಅಭಿವೃದ್ಧಿ, ಕೆರೆಗಳ ಅಭಿವೃದ್ಧಿ, ಬಡವರಿಗೆ ಸೂರು, ಪಿಲಿಕುಳದಲ್ಲಿ ತ್ರಿಡಿ ತಾರಾಲಯ ಸಹಿತ ಅನೇಕ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದೇನೆ. ಅನೇಕ ಯೋಜನೆಗಳು ಟೆಂಡರ್ ಹಂತದಲ್ಲಿದೆ. ಇನ್ನೂ ಅನೇಕ ಯೋಜನೆಗಳು ನಾನಾ ಹಂತದಲ್ಲಿದ್ದು ಅದನ್ನು ಪೂರ್ಣಗೊಳಿಸಲು ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಜನತೆ ಮಗದೊಮ್ಮೆ ನನ್ನನ್ನು ಶಾಸಕನಾಗಿ ಆಯ್ಕೆ ಮಾಡಬೇಕೆಂದು ಕೋರುತ್ತೇನೆ.

ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಸಂಧರ್ಭೊಚಿತವಾಗಿ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ವಿಶ್ವಾಸ್ ಕುಮಾರ್ ದಾಸ್, ಅಬ್ದುಲ್ ಸಲೀಂ, ಕಾಪೋರೇಟರ್‍ಗಳಾದ ರಾಮ್‍ದಾಸ್ ಪ್ರಭು, ಪ್ರವೀಣ್ ಚಂದ್ರ ಆಳ್ವ, ವಿನಯರಾಜ್, ಲ್ಯಾನ್ಸಿ ಲಾಟ್ ಪಿಂಟೋ, ಪ್ರಕಾಶ್ ಸಾಲ್ಯಾನ್, ರತೀಕಲಾ, ಶೈಲಜಾ, ಕವಿತಾ, ಆಶಾ ಡಿಸಿಲ್ವಾ ಹಾಗೂ ಕಾಂಗ್ರೆಸ್ ಪ್ರಮುಖರಾದ ಸಮರ್ಥ ಭಟ್, ಸುರೇಂದ್ರ ಶೈಣೈ, ಶಾಂತಲಾ, ಉದ್ಯಮಿ ವಾಮನ ಪೈ, ನಿರಂಜನ್, ವಿಘ್ನೇಶ್, ಸ್ನೇಹಾಭಟ್, ವಿನುತಾ ವೆಂಕಟೇಶ್, ಶ್ರೇಯಸ್, ಉಜ್ವಲ್, ಅನುಷ್, ಆದಿತ್ಯಭಟ್, ಅರುಣ್ ಭಟ್ ಮೊದಲಾದವರು ಉಪಸ್ಥಿತರಿದ್ದರು.