ಮಂಗಳೂರು:ಮಂಗಳೂರು ಜಂಕ್ಷನ್ (ಕಂಕನಾಡಿ) ರೈಲ್ವೇ ನಿಲ್ದಾಣ ರಸ್ತೆ ಅಭಿವೃದ್ಧಿಗೆ 4.05 ಕೋಟಿ ರೂಪಾಯಿ ವೆಚ್ಚ ಮಾಡಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ಅವರು ತಿಳಿಸಿದರು.

ಅವರು ಕಂಕನಾಡಿ ಜಂಕ್ಷನ್ ರಸ್ತೆ ವೀಕ್ಷಣೆ ಮಾಡಿ ಮಾತನಾಡಿ ಮಂಗಳೂರು ಮಹಾನಗರಪಾಲಿಕೆ ಪ್ರೀಮಿಯಮ್ ಎಫ್ ಎ ಆರ್ ನಿಂದ 2.05 ಕೋಟಿ ರೂಪಾಯಿ ಮತ್ತು ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆಯಿಂದ 2 ಕೋಟಿ ರೂಪಾಯಿ ಮಂಜೂರಾಗಿದೆ ಎಂದರು.

ಈ ಕಾಮಗಾರಿಯನ್ನು ಈ ವಾರದಲ್ಲೇ ಆರಂಭಿಸಬೇಕು. ಇದರಿಂದ ಈ ಭಾಗದ ಜನರು ರೈಲ್ವೇ ನಿಲ್ದಾಣಕ್ಕೆ ಸರಿಯಾದ ಸಮಯದಲ್ಲಿ ಬರುತ್ತಾರೆ, ಇದು ಸಾರ್ವಜನಿಕರಿಗೆ ನೆರವಾಗಲಿದೆ ಎಂದರು.

ಬಹಳ ವರ್ಷಗಳ ಹಿಂದೆ ಮಂಗಳೂರು ಜಂಕ್ಷನ್ ರೈಲ್ವೇ ನಿಲ್ದಾಣವಾಗಿದ್ದರೂ ಇಲ್ಲಿಗೆ ಸರಿಯಾದ ರಸ್ತೆ ಇರದ ಕಾರಣ ಜನರು ಕಿರಿದಾದ ರಸ್ತೆಯಲ್ಲಿಯೇ ಪ್ರಯಾಸದಿಂದ ಬರುತ್ತಿದ್ದರು. ಬಸ್ಸುಗಳ ಸೌಕರ್ಯವೂ ಇಲ್ಲದಿದ್ದ ಕಾರಣದಿಂದ ಜನರು ಆಟೋ ರಿಕ್ಷಾ, ಟ್ಯಾಕ್ಸಿ, ಕಾರುಗಳಿಂದಲೇ ಬರಬೇಕಾಗಿತ್ತು ಎಂದ ಶಾಸಕ ಜೆ.ಆರ್.ಲೋಬೊ ಅವರು ಈ ರಸ್ತೆ ಅಗಲೀಕರಣ ಅನಿರ್ವಾಯವಾಗಿತ್ತು ಎಂದರು.

ಈ ರಸ್ತೆಯನ್ನು ಮಂಗಳೂರು ನಗರಪಾಲಿಕೆ ಮತ್ತು ಸರ್ಕಾರದ ಲೋಕೋಪಯೋಗಿ ಇಲಾಖೆ ವ್ಯವಸ್ಥಿತವಾಗಿ ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ತ್ವರಿತವಾಗಿ ನಿರ್ಮಿಸಬೇಕು ಎಂದರು.

ಶಾಸಕರೊಂದಿಗೆ ಕಾರ್ಪೊರೇಟರ್ ಪ್ರವಿಣ್ ಚಂದ್ರ ಆಳ್ವ, ಮಹಾನಗರಪಾಲಿಕೆಯ ಉಪಆಯುಕ್ತ (ಅಭಿವೃದ್ಧಿ) ಕೆ.ಎಸ್.ಲಿಂಗೇಗೌಡ, ಜಂಟಿ ನಿರ್ದೇಶಕ ಜಯರಾಜ್, ಟಿಪಿಒ ಬಾಲಕೃಷ್ಣ, ಇಂಜಿನಿಯರ್ ಗಣಪತಿ, ಸ್ಥಳೀಯ ಮುಖಂಡರಾದ ಕೃತಿನ್ ಕುಮಾರ್, ಧನರಾಜ್, ಅನಿಲ್ ಮೊದಲಾದವರಿದ್ದರು.