ನಗರದ ಹ್ಯಾಟ್‍ಹಿಲ್‍ನಲ್ಲಿರುವ ವನಿತಾ ಪಾರ್ಕ್ ಮಂಗಳೂರಿನಲ್ಲಿರುವ ಏಕೈಕ ಮಹಿಳಾ ಪಾರ್ಕ್. ಮಂಗಳುರು ಮಹಾನಗರ ಪಾಲಿಕೆಯ ಉದ್ಯಾನವನ ನಿರ್ವಹಿಸಲು ಮೀಸಲಿಡುವ ನಿಧಿಯಿಂದ ಸುಮಾರು ರೂ. 57 ಲಕ್ಷ ವೆಚ್ಚದಿಂದ ಈ ಪಾರ್ಕನ್ನು ಅಭಿವೃದ್ಧಿಗೊಳಿಸಲು ಕಾಮಗಾರಿಯು ಭರದಿಂದ ಸಾಗುತ್ತಿದೆ. ಇದರ ಕಾಮಗಾರಿಯನ್ನು ವೀಕ್ಷಿಸಲು ದಿನಾಂಕ 27.05.2016 ರಂದು ಪಾಲಿಕೆಯ ಅಧಿಕಾರಿಯವರ ಜೊತೆ ಆಗಮಿಸಿದ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಶ್ರೀ ಜೆ.ಆರ್. ಲೋಬೊ ರವರು ಮಾತನಾಡುತ್ತಾ, ಬಹಳ ನಿರೀಕ್ಷೆಯಲ್ಲಿರುವ ಈ ವನಿತಾ ಪಾರ್ಕ್‍ನ ಕಾಮಗಾರಿಯು ಉತ್ತಮವಾಗಿ ನಡೆಯುತ್ತಿದೆ. ಈಗಾಗಲೇ ಬಹು ಉದ್ದೇಶಿತ ಪ್ಯಾರಾಗೋಲ ಕಟ್ಟಡವನ್ನು ನಿರ್ಮಿಸಲಾಗಿದೆ. ಇದರಲ್ಲಿ ಮೀಟಿಂಗ್ ಇನ್ನಿತರ ಸೌಲಭ್ಯವನ್ನು ಕಲ್ಪಿಸಲಾಗುವುದು. ಪಾರ್ಕ್‍ನಲ್ಲಿ ಕೇವಲ ಹೂವಿನ ಗಿಡಗಳಲ್ಲದೇ, ಔಷಧಿ ಗಿಡಗಳನ್ನು ನೆಡಲಾಗುವುದು. ಅದಲ್ಲದೇ ಅಲಂಕಾರಿಕ ಗಿಡ (ಲಾನ್ ವ್ಯವಸ್ಥೆ) ಎಂಪೀ ಥಿಯೇಟರ್, ಮಕ್ಕಳಿಗೆ ಆಟವಾಡಲಿಕ್ಕೆ ವಿಶೇಷ ವ್ಯವಸ್ಥೆ, ವಿದ್ಯುತ್ ದೀಪ, ಸಂಗೀತದ ವ್ಯವಸ್ಥೆಯನ್ನು ಅಳವಡಿಸುವುದರ ಮೂಲಕ ಇದನ್ನು ಜನಸ್ನೇಹಿ ಪಾರ್ಕಾಗಿ ಮಾಡುವುದು ಉದ್ದೇಶವಾಗಿದೆ. ಪಾರ್ಕ್‍ನ ಪ್ರಾಂಗಣಕ್ಕೆ ಇಂಟರ್‍ಲಾಕ್ ವ್ಯವಸ್ಥೆ, ಶೌಚಾಲಯ ವ್ಯವಸ್ಥೆಯನ್ನು ಮಾಡಲಾಗುವುದುದು. ಪಾರ್ಕ್‍ನ ದಕ್ಷಿಣ ಭಾಗದಲ್ಲಿ ಆವರಣ ಗೋಡೆ, ಅಲಂಕಾರಿಕಾ ಗೇಟುಗಳನ್ನು ನಿರ್ಮಿಸಿ, ಇದೊಂದು ಮದರಿ ಪಾರ್ಕ್ ಆಗಿ ಪರಿವರ್ತಿಸಲು ಚಿಂತಿಸಲಾಗಿದೆ. ಈ ಎಲ್ಲಾ ಕಾಮಗಾರಿಗಳನ್ನು ನಿರ್ವಹಿಸಲು ಇನ್ನೂ ರೂ. 25 ಲಕ್ಷಗಳ ಅನುದಾನ ಬೇಕಾಗಬಹುದು. ಈ ಪಾರ್ಕ್‍ನಲ್ಲಿ ಮಹಿಳೆಯರಿಗೆ ಪ್ರತ್ಯೇಕ ಸಮಯದ ವ್ಯವಸ್ಥೆಯನ್ನು ಮಾಡಲಾಗುವುದು. ಉಳಿದ ಸಮಯವನ್ನು ಸಾರ್ವಜನಿಕರಿಗೂ ನೀಡಲಾಗುವುದು. ಒಟ್ಟಾರೆ ಈ ಪಾರ್ಕ್‍ನ ಉಪಯೋಗ ಎಲ್ಲರಿಗೂ ಗರಿಷ್ಠ ಮಟ್ಟದಲ್ಲಿ ಸಿಗಲಿ ಎಂದರು. ಈ ಸಂದರ್ಭದಲ್ಲಿ ಪಾಲಿಕೆಯ ಜಂಟಿ ಆಯುಕ್ತ ಗೋಕುಲ್‍ದಾಸ್ ನಾಯಕ್, ಉಪ ಆಯುಕ್ತ ಶಿವಶಂಕರ ಸ್ವಾಮಿ, ಅಭಿಯಂತರರಾದ ಪಾರ್ವತಿ ದೇವಿ, ನಿತ್ಯಾನಂದ, ಗುತ್ತಿಗೆದಾರ ಮೊೈದಿನ್ ಹಾಗೂ ಮಹಿಳಾ ಒಕ್ಕೂಟದ ಚಂಚಲಾಕ್ಷಿ ತೇಜೋಮಯ ಮೊದಲಾದವರು ಉಪಸ್ಥಿತರಿದ್ದರು.

ಸಜ್ಜುಗೊಳ್ಳುತ್ತಿರುವ ಹ್ಯಾಟ್‍ಹಿಲ್‍ನ ವನಿತಾ ಪಾರ್ಕ್

Image from post regarding ಸಜ್ಜುಗೊಳ್ಳುತ್ತಿರುವ ಹ್ಯಾಟ್‍ಹಿಲ್‍ನ ವನಿತಾ ಪಾರ್ಕ್