ಮಂಗಳೂರು: ಧರ್ಮ ಧರ್ಮಗಳ ನಡುವೆ ಜಗಳವಾಗದಂತೆ ಸರ್ವಧರ್ಮಗಳ ನಡುವೆ ಸಮಾನತೆಯನ್ನು ಕಾಣಬೇಕು. ಎಲ್ಲರೂ ದೇವರ ಮಕ್ಕಳು ಎನ್ನುವ ಭಾವನೆಯನ್ನು ಮೂಡಿಸಿಕೊಂಡು ಬದುಕಬೇಕು ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು. ಅವರು ಜಪ್ಪುವಿನ ಸಂಕಪ್ಪ ಮೆಮೋರಿಯಾಲ್ ಹಾಲ್ ನಲ್ಲಿ ರಾಷ್ಟ್ರೀಯ ಕುಟುಂಬ ಪರಿಹಾರ ನಿಧಿ ವಿತರಿಸಿ ಮಾತನಾಡುತ್ತಿದ್ದರು. ಯಾವುದೇ ಧರ್ಮವೂ ಕೀಳಲ್ಲ, ಎಲ್ಲ ಧರ್ಮಗಳು ಒಂದೇ ಎನ್ನುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು.ಯಾರು ದೇವರುಗಳ ಹೆಸರಲ್ಲಿ ಜಗಳವನ್ನು ತಂದೊಡ್ಡುತ್ತಾರೋ ಅವರು ಮನುಷ್ಯರೇ ಅಲ್ಲ, ಪಿಶಾಚಿಗಳು ಎಂದರು ಖಾರವಾಗಿ.

ಶಾಂತಿಯನ್ನು ಕಾಪಾಡಿ, ಸಹಬಾಳ್ವೆಯಿಂದ ಜೀವಿಸಬೇಕು. ಆಗ ಅಭಿವೃದ್ಧಿಯಾಗುತ್ತದೆ. ಎಲ್ಲಿ ಕಲಹ, ಅಸೂಯೇ ಮೂಡುತ್ತದೋ ಅಲ್ಲಿ ಅಭಿವೃದ್ಧಿಯಾಗುವುದಿಲ್ಲ ಎಂದ ಅವರು ಎಲ್ಲ ಧರ್ಮೀಯರೂ ಒಗ್ಗಟ್ಟಾಗಿ ಪರಸ್ಪರ ಸಮಾನತೆಯಿಂದ ಇರುತ್ತಾರೋ ಅಲ್ಲಿನ ಪರಿಸರ ನಾಜೂಕಾಗಿರುತ್ತದೆ ಅಲ್ಲಿಗೆ ಎಲ್ಲರೂ ಬರಲು ಇಚ್ಚಿಸುತ್ತಾರೆ ಎಂದರು.

ಕಲಹದಿಂದ ದೊಡ್ಡವರಿಗೆ ಯಾವ ಅನಾನುಕೂಲವಾಗುವುದಿಲ್ಲ, ಅವರು ನೆಮ್ಮದಿಯಿಂದ ಬದುಕುತ್ತಾರೆ, ಆದರೆ ಬಡವರು ಮಾತ್ರ ದುಡಿಯಲು ಆಗದೇ, ಬದುಕಲು ಬವಣೆ ಪಡುತ್ತಾರೆ. ಇದನ್ನು ನಾವು ತಿಳಿದು ಯಾವ ರೀತಿಯಲ್ಲಿ ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕೆಂಬುದನ್ನು ನಾವೇ ನಿರ್ಧರಿಸಬೇಕು ಎಂದು ಶಾಸಕ ಜೆ.ಆರ್.ಲೋಬೊ ಕಿವಿ ಮಾತು ಹೇಳಿದರು.

ಇದೇ ಸಂದರ್ಭದಲ್ಲಿ ಶಾಸಕ ಜೆ.ಆರ್.ಲೋಬೊ ಅವರು ಜಪ್ಪಿನಮೊಗರು, ಅತ್ತಾವರ, ಬಜಾಲ್ ಹಾಗೂ ಮಂಗಳೂರು ದೋಟ ಗ್ರಾಮಗಳ 75 ಮಂದಿಗೆ ತಲಾ 20 ಸಾವಿರ ರೂಪಾಯಿ ಪರಿಹಾರ ವಿತರಿಸಿದರು. ಈ ಸಂದರ್ಭದಲ್ಲಿ ಕಾರ್ಪೊರೇಟರ್ ಗಳಾದ ಅಪ್ಪಿ, ಶೈಲಜಾ, ಕವಿತಾ ವಾಸು. ರತಿಕಲಾ, ಸುರೇಂದ್ರ, ಆಶ್ರಯ ಸಮಿತಿ ಸದಸ್ಯ ನವಾಜ್, ಮೆಸ್ಕಾಂ ಸಲಹಾ ಸಮಿತಿಯ ಸದಸ್ಯ ಸದಾಶಿವ ಅಮೀನ್, ಕೆ.ಎಸ್.ಆರ್.ಟಿ.ಸಿ ನಿರ್ದೇಶಕ ಟಿ.ಕೆ.ಸುಧೀರ್, ಆರ್.ಐ ಜೋಯ್ ಮುಂತಾದವರಿದ್ದರು.