ಮಂಗಳೂರು: ಹಕ್ಕು ಪತ್ರ ಸಿಗದಿರುವ ಶಕ್ತಿನಗರ ಕಾರ್ಮಿಕ ಕಾಲೋನಿಯ ಜನರಿಗೆ ಹಕ್ಕುಪತ್ರ ಕೊಡಿಸಲು ಶೀಘ್ರದಲ್ಲೇ ಪ್ರಯತ್ನಿಸಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು.

ಅವರು ಶಕ್ತಿನಗರ ಕಾರ್ಮಿಕ ಕಾಲೋನಿಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಜನಸಂಪರ್ಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಕಾಲೋನಿಯಲ್ಲಿ ಹಲವು ವರ್ಷಗಳಿಂದ ಕಾರ್ಮಿಕರಾಗಿರುವ ಜನರಿಗೆ ಹಕ್ಕುಪತ್ರ, 94 ಸಿಸಿ, ಪಹಣಿಪತ್ರ ಮುಂತಾದ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಇಲ್ಲಿ ಇಷ್ಟು ವರ್ಷಗಳಿಂದ ಜನ ವಾಸವಿದ್ದರೂ ಹಕ್ಕುಪತ್ರ ಕೊಡಲಾಗದಿರುವ ಬಗ್ಗೆ, ಅಲ್ಲಿರುವ ಸಮಸ್ಯೆಗಳ ಬಗ್ಗೆ ಸಭೆಯಲ್ಲಿದ್ದ ಅಧಿಕಾರಿಗಳು ಮಾಹಿತಿ ನೀಡಿದರು. ಶಾಸಕ ಜೆ.ಆರ್.ಲೋಬೊ ಅವರು ಅಧಿಕಾರಿಗಳು ನೀಡಿದ ಹೇಳಿಕೆಯನ್ನು ಆಲಿಸಿ ಸೂಕ್ತ ಸಲಹೆ ನೀಡಿದರು.

ಇಲ್ಲಿಯ ಜನರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವರವಾಗಿ ಆಲಿಸಿದ ಶಾಸಕರು ಹಕ್ಕುಪತ್ರ ಸಿಕ್ಕಿ ಎನ್ ಒಸಿ ಸಿಗದೆ ಇರುವುದು, ಹಕ್ಕುಪತ್ರ ಇದ್ದು ಅದನ್ನು ಬೇರೆಯವರಿಗೆ ಮಾರಾಟ ಮಾಡಿರುವ ಬಗ್ಗೆ ಈ ಪ್ರದೇಶದಲ್ಲಿ ಅಕ್ಟೋಬರ್ 30 ರಂದು ಅಧಿಕಾರಿಗಳು ವಿಶೇಷ ಸಭೆ ನಡೆಸಲಿದ್ದಾರೆ. ಈ ಸಭೆಯು ದಿನಪೂರ್ತಿ ನಡೆಯಲಿದ್ದು ಸುಮಾರು 25 ವರ್ಷಗಳಿಂದ ಪರಿಹಾರ ಸಿಗದಿರುವ ಸಮಸ್ಯೆಗಳಿಗೆ ತುರ್ತಾಗಿ ಪರಿಹಾರ ಕೊಡಲಿದ್ದಾರೆ ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದರು.

ಜನರು ತಮ್ಮ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಅಧಿಕಾರಿಗಳ ಜೊತೆ ಹೇಳಿಕೊಂಡು ಪರಿಹಾರ ಹುಡುಕಲು ನೆರವಾಗಿ ಎಂದು ಮನವಿ ಮಾಡಿದರು.

ಸಭೆಯಲ್ಲಿ ಕಾರ್ಪೊರೇಟರ್ ಜುಬೇದ್ ಅಜೀಜ್, ಮಾಜಿ ಮೇಯರ್ ಅಬ್ದುಲ್ ಅಜೀಜ್, ಮರಿಯಮ್ಮ ಥೋಮಸ್, ತಶೀಲ್ದಾರ್ ಗುರುಪ್ರಸಾದ್, ಜಾಯ್, ಮಾಲೀನಿ ರೋಡ್ರಿಗಸ್, ಅಲ್ವೀನ್ ಪಾಯಸ್ ಮುಂತಾದವರಿದ್ದರು.