ಮಂಗಳೂರು: ಮರಳು ಸಾಗಾಟ ಪುನರಾರಂಭ ಮಾಡುವ ಕುರಿತು ಒಂದು ಸಭೆ ಕರೆದು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್ ಅವರು ಭರವಸೆ ನೀಡಿದ್ದಾರೆ ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದ್ದಾರೆ.

ತಾನು ಜಿಲ್ಲಾಧಿಕಾರಿಗಳ ಜೊತೆ ಇಂದು ಮಾತನಾಡಿದ್ದು ಮರಳು ಸಾಗಾಟ ಸ್ಥಗಿತಗೊಂಡಿರುವುದರಿಂದ ಆಗುತ್ತಿರುವ ತೊಂದರೆಯನ್ನು ಅವರ ಗಮನಕ್ಕೆ ತಂದಿದ್ದು ಅವರೂ ಕೂಡಾ ಮರಳು ತೆಗೆಯುವ ಬಗ್ಗೆ ಕಾನೂನಿನ್ವಯ ಸೂಕ್ತ ವ್ಯವಸ್ಥೆ ಮಾಡುವ ಕುರಿತು ಸಕಾರಾತ್ಮಕಾವಾಗಿ ಪ್ರತಿಕ್ರಿಯೆಸಿದರು ಎಂದಿದ್ದಾರೆ.

ಮರಳು ಸಾಗಾಟ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಉಂಟಾಗಿರುವ ಸಮಸ್ಯೆಯ ಕುರಿತು ಜಿಲ್ಲಾಧಿಕಾರಿಗಳಿಗೆ ವಿವರ ನೀಡಿದ್ದು ತ್ವರಿತವಾಗಿ ಸಭೆ ಕರೆದು ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದ್ದಾರೆ.

ಟಿಆರ್ ಝಡ್ ವ್ಯಾಪ್ತಿಯಲ್ಲಿ ಮರಳು ತೆಗೆಯುವ ಕುರಿತು ಸರ್ಕಾರದ ನಿರ್ದಿಷ್ಟವಾದ ನಿಯಮಗಳು, ಆದೇಶಗಳು ಇರುವುದರಿಂದ ಆ ಆದೇಶಗಳನ್ವಯವೇ ಮರಳು ತೆಗೆಯುವ ಅನುಮತಿ ನೀಡಬೇಕಾಗುತ್ತದೆ. ಆದುದರಿಂದ ಹಿಂದೆ ನೀಡಿರುವ ಪರವಾನಿಗೆಗಳನ್ನು ಕೂಡಾ ಈ ನಿಯಮಗಳನ್ವಯ ಪರಿಶೀಲಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಅಭಿಪ್ರಾಯಪಟ್ಟಿರುವರೆಂದು ತಿಳಿದು ಬಂದಿದೆ.