ಮಂಗಳೂರು: ಸಿಟಿ ಸೆಂಟ್ರಲ್ ಮಾರ್ಕೇಟ್ ನಲ್ಲಿ ತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡಬೇಕು, ಅಲ್ಲೇ ಬಿಟ್ಟು ವಿನಾಕಾರಣ ತೊಂದರೆ ಕೊಡಬಾರದು. ಈ ನಿಟ್ಟಿನಲ್ಲಿ ಕಾರ್ಪೊರೇಷನ್ ಅಧಿಕಾರಿಗಳು ನಿಗಾವಹಿಸಬೇಕು ಎಂದು ಶಾಸಕ ಜೆ.ಆರ್.ಲೋಬೊ ಸಲಹೆ ಮಾಡಿದರು.

ಅವರು ಇಂದು ಸಿಟಿ ಸೆಂಟ್ರಲ್ ಮಾರ್ಕೇಟ್ ಮಾಲೀಕರ ಸಭೆ ನಡೆಸಿ ತ್ಯಾಜ್ಯ ಸಮಸ್ಯೆಯನ್ನು ನಿವಾರಿಸಬೇಕು. ಸ್ವಚ್ಚತೆ ಕಾಪಾಡುವುದಕ್ಕೆ ಪ್ರತಿಯೊಬ್ಬರು ಆಸಕ್ತಿವಹಿಸಬೇಕು. ಇದು ಕಾರ್ಪೊರೇಷನ್ ಸಮಸ್ಯೆ, ಅದನ್ನು ಅವರೇ ನಿರ್ವಹಿಸಬೇಕು ಎಂದು ತಿಳಿಯಬಾರದು ಎಂದರು.

ಮಂಗಳೂರು ಸ್ಮಾರ್ಟ್ ಸಿಟಿ ಯಾಗಿರುವುದು ಕೂಡಾ ಎಲ್ಲರ ಸಹಕಾರದಿಂದ ಮತ್ತು ಸ್ಮಾರ್ಟ್ ಸಿಟಿ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರ ಕರ್ತವ್ಯ. ಎಲ್ಲರು ತಮ್ಮ ತಮ್ಮ ಹೊಣೆಗಾರಿಕೆಯನ್ನು ನಿರ್ವಹಿಸಿದರೆ ಮಾತ್ರ ಸ್ಮಾರ್ಟ್ ಸಿಟಿಯಾಗಲು ಕಾರಣವಾಗುತ್ತದೆ ಹೊರತು ಯಾರೂ ತಮಗೆ ಸೇರಿದ್ದಲ್ಲವೆಂದು ಸುಮ್ಮನಿರುವುದಲ್ಲ ಎಂದರು.

ಸಿಟಿ ಮಾರುಕಟ್ಟೆಯಲ್ಲಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಟ್ರಾಫಿಕ್ ಸಿಬ್ಬಂಧಿ ನಿಗಾವಹಿಸಬೇಕು. ರಾತ್ರಿ ಹೊತ್ತು ಬಹಳ ಬೇಗ ಲಾರಿ ಬರುತ್ತಿದ್ದು ಇದರಿಂದ ಅನಾನುಕೂಲವಾಗುತ್ತಿದೆ ಎಂದು ಸ್ಥಳಿಯರು ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಶಾಸಕ ಜೆ.ಆರ್.ಲೋಬೊ ಅವರು ವಾಹನಗಳು ರಾತ್ರಿ 9 ಗಂಟೆ ನಂತರ ಹಾಗೂ ಬೆಳಿಗ್ಗೆ 8 ಗಂಟೆವರೆಗೆ ಬರಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದರು.

ಮಾರುಕಟ್ಟೆಯಲ್ಲಿ ಒಳಚರಂಡಿ ವ್ಯವಸ್ಥೆ, ಫುಟ್ ಪಾತ್ ವ್ಯವಸ್ಥೆ ಸಹಿತ ಅಲ್ಲಿರುವ ಅನೇಕ ಸಮಸ್ಯೆಗಳ ಬಗ್ಗೆ ಸಿಟಿ ಸೆಂಟ್ರಲ್ ಮಾರುಕಟ್ಟೆ ಮಾಲೀಕರು ಶಾಸಕರ ಗಮನ ಸೆಳೆದಾಗ ಎಲ್ಲವನ್ನು ಆಲಿಸಿ ಅಧಿಕಾರಿಗಳು ಈ ಬಗ್ಗೆ ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.

ಸಭೆಯಲ್ಲಿ ಟ್ರಾಫಿಕ್ ಇನ್ಸ್ ಪೆಕ್ಟರ್ ಕೊಟ್ಟಾರಿ , ಬಂದರು ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಶಾಂತಾರಾಮ್, ಕಂದಾಯ ಅಧಿಕಾರಿ ಪ್ರವೀಣ್, ಹೆಲ್ತ್ ಇನ್ಸ್ ಪೆಕ್ಟರ್ ಯಶವಂತ್, ಸಿಟಿ ಮಾರ್ಕೇಟ್ ಮಾಲೀಕರ ಸಂಘದ ಅಧ್ಯಕ್ಷ ಇಬ್ರಾಹಿಂ, ಟ್ರಿಬೂನಲ್ ಮೆಂಬರ್ ಡೆನಿಸ್ ಡಿಸಿಲ್ವಾ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.