ಮಂಗಳೂರು: ಮಂಗಳೂರಿನ ಜನಸಂಖ್ಯೆ ಹೆಚ್ಚಾಗುತ್ತಿದೆ ಎನ್ನುವ ಅನುಭವವಾಗುತ್ತಿದೆಯೇ ಹೊರತು ಜನಸಂಖ್ಯೆ ಹೆಚ್ಚಾಗುತ್ತಿಲ್ಲ, ಈಗಲೂ ಬರೇ 5 ಲಕ್ಷ ಮಾತ್ರ ಎಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು. ಅವರು ರಥಬೀದಿಯ ಫ್ಲಾಟ್ ಮೀಟಿಂಗ್ ನಲ್ಲಿ ಮಾತನಾಡುತ್ತಿದ್ದರು. ಮಂಗಳೂರು ಬೆಳೆಯುತ್ತಿದೆ ಎನ್ನುವ ಭಾವನೆ ಮೂಡುತ್ತಿದೆ. ಆದರೆ ಮಂಗಳೂರು ಬೆಳೆಯುವುದು ಅವಶ್ಯಕತೆ ಇದೆ. ಕೈಗಾರಿಕೆಗಳು, ಐಟಿ, ಬಿಟಿ ಕಂಪೆನಿಗಳು ಹೆಚ್ಚಾಗಬೇಕು. ದುಡಿಯುವ ಕೈಗಳಿಗೆ ಕೆಲಸ ಸಿಗಬೇಕು ಎಂದ ಅವರು ಬಂಡವಾಳ ಹೂಡಿಕೆ ಹರಿದು ಬರಬೇಕಾಗಿದೆ, ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಬಂಡವಾಳ ಹೂಡಿಕೆಯಾಗುತ್ತಿಲ್ಲ ಎಂದರು.

ಮಂಗಳೂರಿಗೆ ಎಡಿಬಿ ಎರಡನೇ ಹಂತದ ಕಾಮಗಾರಿಗಳಿಗೆ ಒಪ್ಪಿಗೆ ಸಿಇಕಿದೆ. ಸಾಮಾನ್ಯವಾಗಿ ಎಡಿಬಿ ಯೋಜನೆ ಎರಡನೇ ಸಲ ಬರುವುದಿಲ್ಲ. ಆದರೆ ನಮ್ಮ ಅದೃಷ್ಟ ನಮಗೆ ಎರಡನೇ ಹಂತದ ಕಾಮಗಾರಿಗೆ ಸರ್ಕಾರ ಒಪ್ಪಿಗೆ ಕೊಟ್ಟಿದೆ. ಸರಿ ಸುಮಾರು 500 ಕೋಟಿ ರೂಪಾಯಿ ಹರಿದು ಬಂದಿದೆ ಎಂದರು. ಕುಡಿಯುವ ನೀರು ಮತ್ತು ಒಳಚರಂಡಿ ಯೋಜನೆಗೆ ಈ ಹಣ ವಿನಿಯೋಗಿಸಲಾಗುತ್ತಿದೆ. ಕುಡಿಯುವ ನೀರು ಒದಗಿಸಲು ಅಮೃತ ಯೋಜನೆ ಅನುಷ್ಟಾನವಾಗುತ್ತಿದೆ.. ಇದಕ್ಕಾಗಿ 150 ಕೋಟಿ ವೆಚ್ಚವಾಗುತ್ತಿದೆ. ಈ ಯೋಜನೆಗಳು ವ್ಯವಸ್ಥಿತವಾಗಿ ಅನುಷ್ಠಾನವಾಗುವುದಕ್ಕೆ ಜನರು ಸಹಕರಿಸಬೇಕು ಎಂದರು.

ಮಂಗಳೂರು ಮೀನುಗಾರಿಕೆ ಮತ್ತು ಮಂಗಳೂರು ಹಳೆಬಂದರು ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ಸ್ಮಾರ್ಟ್ ಸಿಟಿ ಕೂಡಾ ಬಂದಿದೆ. ಮೀನುಗಾರಿಕೆ ಮತ್ತು ಬಂದರಿನ ಅಭಿವೃದ್ಧಿ ಆದಾಗ ಮಾತ್ರ ನಮ್ಮ ಸ್ಮಾರ್ಟ್ ಸಿಟಿ ಕೂಡಾ ಅಭಿವೃದ್ಧಿಯಾಗಲಿದೆ ಎಂದ ಶಾಸಕ ಜೆ.ಆರ್.ಲೋಬೊ ಅವರು ಈ ನಿಟ್ಟಿನಲ್ಲಿ ಯೋಜನೆಗಳು ಆರಂಭವಾಗಲಿವೆ ಎಂದರು. ಮಂಗಳೂರಲ್ಲಿ ಮಾರುಕಟ್ಟೆಗಳ ಅಭಿವೃದ್ಧಿಯಾಗಬೇಕಾಗಿದೆ. ಈಗಾಗಲೇ ಉರ್ವಾ ಮಾರುಕಟ್ಟೆಯನ್ನು ಅಭಿವೃದ್ಧಿಗೊಳೀಸಲಾಗುತ್ತಿದೆ. ಕದ್ರಿ, ಕಂಕನಾಡಿ, ಅಳಕೆ ಹೀಗೆ ಮಾರುಕಟ್ಟೆಗಳನ್ನು ಅಭಿವೃದ್ಧಿ ಪಡಿಸಿ ಇಲ್ಲಿ ವಾರದ ಸಂತೆ ಕೂಡಾ ಬರಬೇಕು. ಇದು ಬಂದರೆ ಸ್ಥಳೀಯವಾಗಿ ಬೆಳೆದ ತರಕಾರಿ, ಹಣ್ಣುಗಳು ಮಾರಾಟವಾಗುತ್ತದೆ ಎಂದರು.