ಮಂಗಳೂರು: ಬೊಕ್ಕಪಟ್ಣ ಬೆಂಗ್ರೆಯ ಜನರಿಗೆ ಹಕ್ಕುಪತ್ರಗಳನ್ನು ಶೀಘ್ರದಲ್ಲೇ ನೀಡಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ಅವರು ತಿಳಿಸಿದರು.

ಅವರು ಬೊಕ್ಕಪಟ್ಣ ಬೆಂಗ್ರೆಯ ವಿಠೋಭ ಭಜನಾ ಮಂದಿರದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡುತ್ತಿದ್ದರು.

ಚುನಾವಣಾ ಪೂರ್ವದಲ್ಲಿ ನೀಡಿದ್ದ ಆಶ್ವಾಸನೆಗಳನ್ನು ಪೂರೈಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ. ಹಕ್ಕುಪತ್ರ ಪತ್ರಗಳನ್ನು ಫಲಾನುಭವಿಗಳಿಗೆ ನೀಡಲಾಗುವುದು ಎಂದ ಅವರು ವಿದ್ಯುತ್ ಸಮಸ್ಯೆಯನ್ನು ನಿವಾರಿಸುವ ಉದ್ದೇಶದಿಂದ ಉರ್ವಾ ಬಳಿ ನೂತನ ಉಪಕೇಂದ್ರವನ್ನು ಸ್ಥಾಪಿಸಲಾಗುವುದು ಎಂದರು.

ಸಾಗರಮಾಲ ಯೋಜನೆಯಡಿ ಬೆಂಗ್ರೆಯ ಸಮಗ್ರ ಅಭಿವೃದ್ಧಿಯನ್ನು ಮಾಡುವ ಉದ್ದೇಶದಿಂದ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ ಶಾಸಕ ಜೆ.ಆರ್.ಲೋಬೊ ಅವರು ಇಲ್ಲಿಯ ಮುಖ್ಯ ಸಮಸ್ಯೆಗಳಾದ ರುದ್ರಭೂಮಿ ಹಾಗೂ ಸಾಂಸ್ಕ್ರುತಿಕ ಕಾರ್ಯಕ್ರಮಗಳನ್ನು ನಡೆಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ನುಡಿದರು.

ಇದಕ್ಕೂ ಮೊದಲು ಶಾಸಕ ಜೆ.ಆರ್.ಲೋಬೊ ಅವರು ಸ್ಥಳೀಯರ ಸಮಸ್ಯೆಗಳ ಬಗ್ಗೆ ಅಹವಾಲು ಸ್ವೀಕರಿಸಿದರು. ಈ ಜನಸಂಪರ್ಕ ಸಭೆಯಲ್ಲಿ ಜನರು ತಮ್ಮ ಸಮಸ್ಯೆಗಳನ್ನು ಶಾಸಕರಿಗೆ ವಿವರಿಸಿದರು.