ಮಂಗಳೂರು: ಬೆಂಗ್ರೆಯಲ್ಲಿ ಅನಾದಿಕಾಲದಿಂದ ಸರ್ಕಾರಿ ಭೂಮಿಯಲ್ಲಿ ಮನೆ ಕಟ್ಟಿಕೊಂಡು ವಾಸವಿರುವವರಿಗೆ ಸರ್ಕಾರದಿಂದ ನಿವೇಶನಗಳಿಗೆ ಹಕ್ಕುಪತ್ರ ಕೊಡುವ ಬಗ್ಗೆ ಶಾಸಕ ಜೆ.ಆರ್.ಲೋಬೊ ಅವರ ಉಸ್ತುವಾರಿಯಲ್ಲಿ ಸಮೀಕ್ಷೆ ಕಾರ್ಯ ಆರಂಭಿಸಲಾಗಿದೆ. ಇದೇ ಮೊದಲ ಬಾರಿಗೆ ಇಲ್ಲಿರುವವರಿಗೆಲ್ಲಾ ಹಕ್ಕುಪತ್ರ ಸಿಗಲಿದೆ. ಸುಮಾರು 3 ಸಾವಿರ ಮನೆಗಳಿದ್ದು ಇವರಿಗೆ ಹಕ್ಕುಪತ್ರವಿಲ್ಲ. ಕಸಬಾ ಬೆಂಗ್ರೆ, ತೋಟ ಬೆಂಗ್ರೆ ಹಾಗೂ ಕುದ್ರೋಳಿ ಬೆಂಗ್ರೆಯಿದ್ದು ಇವರೆಲ್ಲರಿಗೂ ಹಕ್ಕು ಪತ್ರ ಕೊಡಬೇಕೆಂಬುದು ಶಾಸಕ ಜೆ.ಆರ್.ಲೋಬೊ ಅವರ ಕನಸು.

ಜಿಲ್ಲಾಧಿಕಾರಿಯವರ ಆದೇಶ, ಡಿಡಿಎಲ್ ಆರ್ ಅವರ ಸಹಕಾರ ಮತ್ತು ಶಾಸಕರ ಒತ್ತಾಯ ಕೂಡಿ ಇದು ಕಾರ್ಯಗತವಾಗುತ್ತಿದೆ. 10 ಜನ ಸರ್ವೇಯರಗಳು ಮೂರು ತಂಡಗಳಾಗಿ ಸರ್ವೇ ಕೆಲಸ ಆರಂಭಿಸಿದ್ದು ಮುಂದಿನ 2-3 ತಿಂಗಳೊಳಗೆ ಸರ್ವೇ ಕೆಲಸ ಪೂರ್ಣಗೊಳಿಸುತ್ತಾರೆ. ಆನಂತರ ಕಂದಾಯ ಇಲಾಖೆ ಅಧಿಕಾರಿಗಳು ತಪಾಸಣೆಕೈಗೊಳ್ಳುತ್ತಾರೆ. ಈ ಎಲ್ಲಾ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿಕೊಟ್ಟು ಹಕ್ಕುಪತ್ರವನ್ನು ಕೊಡಬೇಕು ಎಂದು ನಿನ್ನೆ ನಡೆದ ಪೂರ್ವ ಭಾವಿ ಸಭೆಯಲ್ಲಿ ಶಾಸಕ ಜೆ.ಆರ್.ಲೋಬೊ ಅವರು ಅಧಿಕಾರಿಗಳಿಗೆ ತಿಳಿಸಿದರು. ಯಾವುದೇ ಕಾರಣಕ್ಕೂ ವಿಳಂಭ ಮಾಡದೆ ಸರ್ವೇ ಕೆಲಸ ಮುಗಿಸಿದರೆ ಮುಂದಿನ ಕ್ರಮಕ್ಕೆ ಅನುಕೂಲವಾಗಲಿದೆ. ಇದನ್ನು ಎಲ್ಲರೂ ಆದ್ಯತೆಯ ಕ್ರಮವೆಂದು ತಿಳಿಯುವಂತೆ ಸೂಚಿಸಿದರು.

ಈಗಾಗಲೇ ಮೂರು ನಾಲ್ಕು ಸಭೆ ನಡೆಸಲಾಗಿದ್ದು ಇಂದು ನಡೆಯುತ್ತಿರುವುದು ಪೂರ್ವಭಾವಿ ಸಭೆಗಳಲ್ಲಿ ಅಂತಿಮವೆಂದು ತಿಳಿಯುವಂತೆಯೂ ಅಧಿಕಾರಿಗಳಿಗೆ ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು.
ಪ್ರತಿ ಚುನಾವಣೆಯ ಸಂದರ್ಭದಲ್ಲಿ ಬೆಂಗ್ರೆಯಲ್ಲಿ ಹಕ್ಕುಪತ್ರಗಳಿಗೆ ಬೇಡಿಕೆ ಬರುತ್ತಿತ್ತು. ಆದರೆ ಅದು ಈಡೇರಿರಲಿಲ್ಲ. ಈ ಸಲ ಇದು ಯಾವುದೇ ಕಾರಣಕ್ಕೂ ಆಗಲೇ ಬೇಕು ಎನ್ನುವ ಹಠಹಿಡಿದು ಶಾಸಕ ಜೆ.ಆರ್.ಲೋಬೊ ಅವರು ಮಾಡಿಸುತ್ತಿದ್ದಾರೆ. ಈದಿನ ಬೆಂಗ್ರೆಯಲ್ಲಿ ಸರ್ವೇ ಕೆಲಸ ಆರಂಭವಾಗಿದ್ದು ಸ್ಥಳೀಯರು ಸಹಕಾರ ನೀಡಿದರೆ ಅವಧಿಗೂ ಮುನ್ನ ಸರ್ವೇ ಕೆಲಸ ಮುಗಿಸಿ ಕಂದಾಯ ಅಧಿಕಾರಿಗಳ ಕೆಲಸ ಶುರುವಾಗಲಿದೆ. ಆ ಮೂಲಕ ನೆನೆಗುದಿಗೆ ಬಿದ್ದಿದ್ದ ಬೆಂಗ್ರೆ ನಿವಾಸಿಗಳ ಹಕ್ಕುಪತ್ರದ ಕನಸು ಸಾಕಾರಗೊಳ್ಳಲಿದೆ.