ಮಂಗಳೂರು: ಬಾಕಿ ಇರುವ ರೈಲ್ವೇ ಕಾಮಗಾರಿಗಳನ್ನು ಅತೀ ಶೀಘ್ರವಾಗಿ ಪೂರ್ಣಗೊಳಿಸುವಂತೆ ಶಾಸಕ ಜೆ.ಆರ್.ಲೋಬೊ ಅವರು ಅಧಿಕಾರಿಗಳಿಗೆ ತಿಳಿಸಿದರು.

ಅವರು ಮಲ್ಲಿಕಟ್ಟೆ ಕಚೇರಿಯಲ್ಲಿ ರೈಲ್ವೇ ಅಧಿಕಾರಿಗಳು ಮತ್ತು ಮಂಗಳೂರು ಮಹಾನಗರಪಾಲಿಕೆ ಅಧಿಕಾರಿಗಳ ಜೊತೆ ಚರ್ಚಿಸಿದರು.

ಕನಕರಬೆಟ್ಟು- ಸೂಟರ್ಪೇಟೆ ಅಂಡರ್ ಪಾಸ್ ಕಾಮಗಾರಿ ವಿಳಂಭವಾಗುತ್ತಿರುವ ಬಗ್ಗೆ ಅಧಿಕಾರಿಗಳಿಂದ ವಿವರ ಪಡೆದ ಶಾಸಕರು ಈ ಕಾಮಗಾರಿಯನ್ನು ಮುಗಿಸುವ ಬಗ್ಗೆ ಮತ್ತು 3 ಮೀಟರ್ ಅಗಲದ ಕಾಂಕ್ರೀಟ್ ರಸ್ತೆ ಮಾಡಲು ಸೂಚಿಸಿದರು.

ಕೆ ಎಂಸಿ ಬಳಿ ಒಳಚರಂಡಿ ನಿರ್ಮಿಸುವ ಬಗ್ಗೆ ಸ್ಥಳೀಯರ ಬೇಡಿಕೆಗೆ ಸ್ಪಂದಿಸಿದ ಶಾಸಕರು ಅಲ್ಲಿ ಸಮಸ್ಯೆಯಾಗುತ್ತಿರುವುದನ್ನು ಅಧಿಕಾರಿಗಳಿಗೆ ವಿವರಿಸಿ ಈ ಕಾಮಗಾರಿಯನ್ನೂ ಆದಷ್ಟು ಬೇಗ ಮುಗಿಸುವಂತೆ ತಿಳಿಸಿದರು.

ಸರಿಪಳ್ಳ-ಕಣ್ಣಗುಡ್ಡೆ ರಸ್ತೆ ಅಭಿವೃದ್ಧಿ, ಮಹಾಕಾಳಿಪಡ್ಪು ರೈಲ್ವೇ ಅಂಡರ್ ಪಾಸ್ ರಸ್ತೆ, ಅತ್ತಾವರ ವೈದ್ಯನಾಥ ನಗರ ರೈಲ್ವೇ ಕ್ರಾಸಿಂಗ್ ಬಗ್ಗೆಯೂ ಶಾಸಕ ಜೆ.ಆರ್.ಲೋಬೊ ಅವರು ಮಾಹಿತಿ ಪಡೆದು ಈ ಕಾಮಗಾರಿಗಳ ಬಗ್ಗೆ ಸೂಕ್ತ ಸಲಹೆ ನೀಡಿದರು.

ಸಭೆಯಲ್ಲಿ ಮಂಗಳೂರು ಮಹಾನಗರಪಾಲಿಕೆ ಕಮಿಷನರ್ ನಜೀರ್, ಉಪಆಯುಕ್ತ (ಅಭಿವೃದ್ಧಿ) ಕೆ.ಎಸ್.ಲಿಂಗೇಗೌಡ,ಕಾರ್ಪೊರೇಟರ್ ಗಳು ಸಹಿತ ಮತ್ತಿತರರು ಉಪಸ್ಥಿತರಿದ್ದರು.