ಪರಿಚಯ

ಶ್ರೀ ಜೆ.ಆರ್.ಲೋಬೊ

ಜೆ.ಆರ್. ಲೋಬೋ ಅವರ ಸ್ವವಿವರ

ಶ್ರೀಯುತ ಜಾನ್ ರಿಚರ್ಡ್ ಲೋಬೋ ಅವರ ಕರ್ನಾಟಕ ಆಡಳಿತ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅನುಭವಿ ಆಡಳಿತಗಾರ. ದೂರದೃಷ್ಟಿ, ಸ್ಪಂದನಶೀಲ ಗುಣ ಮತ್ತು ಅರ್ಪಣಾ ಮನೋಭಾವವಿರುವ ನಾಯಕ. ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಕಷ್ಟಪಟ್ಟು ಶಿಕ್ಷಣ ಪಡೆದು, ಪರಿಶ್ರಮ ಮತ್ತು ಕಾರ್ಯತ್ಪರತೆಯಿಂದ ಅಧ್ಯಯನ ನಡೆಸಿ 23ರ ಹರೆಯದಲ್ಲಿ ಕೆಎಎಸ್ ತೇರ್ಗಡೆ. 35 ವರ್ಷಗಳ ಸುದೀರ್ಘ ಸೇವಾಧಿಯಲ್ಲಿ ತನ್ನ ವಿಶಿಷ್ಟ ಕಾರ್ಯವೈಖರಿಯಿಂದ ಜನರ ಪ್ರೀತಿ ಮತ್ತು ಹಿರಿಯರ ಪ್ರಶಂಸೆ ಗಳಿಸಿದ್ದರು. ಯುವ ಅಧಿಕಾರಿಯಾಗಿ ಸಮಾಜ ದೀನದಲಿತರಿಗೆ ನ್ಯಾಯ ಒದಗಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಶ್ಲಾಘನೀಯ. ಖಾಸಗಿ ಮತ್ತು ಸಾರ್ವಜನಿಕ ಜೀವನದಲ್ಲಿ ಅವರು ಎಲ್ಲರಿಗೂ ಮಾದರಿ ಎಣಿಸಿದ್ದಾರೆ. ಕಂದಾಯ, ನಗಾರಾಭಿವೃದ್ಧಿ, ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಹೊಸ ಯೋಜನೆಗಳ ಅನುಷ್ಠಾನದಲ್ಲಿ ಲೋಬೋ ಅನನ್ಯ ಅನುಭವ ಹೊಂದಿದ್ದಾರೆ.

ಸಮಾಜ ಸೇವಾ ಚಟುವಟಿಕೆಗಳು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಕ್ರಾಸ್ ಸೊಸೈಟಿ ಶಾಖೆಯನ್ನು ಸ್ಥಾಪಿಸಿ ಹಲವಾರು ವೈದ್ಯಕೀಯ ಕಾರ್ಯಕ್ರಮಗಳ ಆಯೋಜನೆ. ಜಿಲ್ಲೆಯಲ್ಲಿ ಗಲಭೆಗಳು ನಡೆದಾಗ ಸಂತ್ರಸ್ತರಿಗೆ ಸಕಾಲದಲ್ಲಿ ದಿನಪಯೋಗಿ ಅಗತ್ಯ ವಸ್ತುಗಳ ವಿತರಣೆ, ಸುನಾಮಿ ಎಚ್ಚರಿಕೆ ಸಂದರ್ಭದಲ್ಲಿ ಕಡಲ ತೀರದಲ್ಲಿ ವಾಸಿಸುವ ಕುಟುಂಬಗಳಿಗೆ ನೆರವು, ರೆಡ್ ಕ್ರಾಸ್ ರಕ್ತನಿಧಿ ಸ್ಥಾಪಿಸಿ ಆ ಮೂಲಕ ಹಲವಾರು ಕಾರ್ಯಕ್ರಮಗಳ ಆಯೋಜನೆ.

ಪಿಲಿಕುಳ ನಿಸರ್ಗಧಾಮ ಅಭಿವೃದ್ಧಿ (ಬೃಹತ್ ಪ್ರವಾಸೋದ್ಯಮ ಯೋಜನೆ)

ಪಿಲಿಕುಳ ನಿಸರ್ಗಧಾಮ ದಕ್ಷಿಣ ಕನ್ನಡ ಜಿಲ್ಲಾಡಳಿತ ಪ್ರಯೋಜಿತ ಪರಿಸರ ಪ್ರವಾಸೋದ್ಯಮ ಯೋಜನೆ. 1994ರಲ್ಲಿ ಭರತ್ ಲಾಲ್ ಮೀನಾ ಜಿಲ್ಲಾಧಿಕಾರಿ ಮತ್ತು ಜೆ.ಆರ್.ಲೋಬೋ ಜಿಲ್ಲಾಧಿಕಾರಿಯವರ ಸ್ಥಾನೀಯ ಸಹಾಯಕರಾಗಿದ್ದಾಗ ಪಿಲಿಕುಳ ಯೋಜನೆಗೆ ಚಾಲನೆ ನೀಡಲಾಗಿತ್ತು. ಅಂದಿನಿಂದ ಇಂದಿನ ವರೆಗೂ ಲೋಬೋ ಅವರ ಪರಿಕಲ್ಪನೆಯಲ್ಲಿ ಪಿಲಿಕುಳ ನಿಸರ್ಗಧಾಮ ಅಭಿವೃದ್ಧಿಯಾಗುತ್ತಿದೆ. ಹದಿನೆಂಟು ವರ್ಷಗಳ ಕಾಲ ಯೋಜನೆಯ ಕಾರ್ಯನಿರ್ಹಕ ನಿರ್ದೇಶಕರಾಗಿದ್ದರು.

ಸುಮಾರು 370 ಎಕರೆ ಸರಕಾರಿ ಜಮೀನಿನಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿರುವ ರಾಷ್ಟ್ರೀಯ ಪ್ರವಾಸೋದ್ಯೋಮ ಭೂಪಟದಲ್ಲಿ ಗುರುತಿಸಿಕೊಂಡಿದೆ. ಪಿಲಿಕುಳ ಯೋಜನೆಯ ಮೂಲ ಉದ್ದೇಶ ಜೀವವೈವಿಧ್ಯ ಸಂರಕ್ಷಣೆ, ಪರಂಪರೆ ಮತ್ತು ಸಂಸ್ಕೃತಿ ಸಂರಕ್ಷಣೆ, ವೈಜ್ಞಾನಿಕ ಅರಿವು ಮೂಡಿಸುವುದು ಮತ್ತು ಪ್ರವಾಸೋದ್ಯಮ ಅಭಿವೃದ್ಧಿ.

ಈ ಹಿನ್ನೆಲೆಯಲ್ಲಿ ನಿಸರ್ಗಧಾಮದಲ್ಲಿ ವನ್ಯಜೀವಿ ಮೃಗಾಲಯ, ಬಟಾನಿಕಲ್ ಗಾರ್ಡನ್, ಪಾರಂಪರಿಕ ಗ್ರಾಮ, ಪ್ರಾದೇಶಿಕ ವಿಜ್ಞಾನ ಕೇಂದ್ರ, ದೋಣಿ ವಿಹಾರ ಕೇಂದ್ರ, ವಾಟರ್ ಪಾರ್ಕ್, ಜೀವವೈವಿಧ್ಯ ಕೇಂದ್ರ, ದೇಶದ ಮೊದಲನೇ ತ್ರೀ-ಡಿ (ಮೂರು ಆಯಾಮ) ತಾರಾಲಯ (ಪ್ಲೆನಟೋರಿಯಮ್) , ಆಕ್ವೇರಿಯಮ್, ಅರ್ಬನ್ ಹಾತ್, ಕಾಟೇಜುಗಳು, ಗೋಲ್ಫ್ ಕೋರ್ಸ್ ಇತ್ಯಾದಿ ಸೇರಿಕೊಂಡಿದೆ.

ಹಲವಾರು ಪರಿಸರ ಮತ್ತು ಪ್ರವಾಸೋದ್ಯಮ ಘಟಕಗಳು ಒಂದೆಡೆ ಸೇರಿರುವ ದೇಶದ ಏಕೈಕ ಯೋಜನೆ ಇದಾಗಿದೆ. ಈಗಾಗಲೇ ನೂರು ಕೋಟಿ ರೂಪಾಯಿ ಬಂಡವಾಳ ಹೂಡಲಾಗಿದ್ದು, 65 ಕೋಟಿ ರೂಪಾಯಿ ವಿವಿಧ ಸರಕಾರಿ ಯೋಜನೆಗಳ ಮೂಲಕ ಹರಿದು ಬರಲಿದೆ. ಐದು ಲಕ್ಷಕ್ಕಿಂತ ಹೆಚ್ಚು ಮಂದಿ ಪ್ರವಾಸಿಗರು ಪಿಲಿಕುಳ ನಿಸರ್ಗಧಾಮಕ್ಕೆ ಭೇಟಿ ನೀಡುತ್ತಿದ್ದು, ರಾಜ್ಯದ ಪ್ರಮುಖ ಪ್ರವಾಸೋದ್ಯಮ ಕೇಂದ್ರವಾಗಿದೆ.

ಪ್ರವಾಸೋದ್ಯಮ ಮಾತ್ರವಲ್ಲದೆ ಜೀವವೈವಿಧ್ಯ, ವಿಜ್ಞಾನ ಮತ್ತು ತಂತ್ರಜ್ಞಾನ, ಪರಂಪರೆ, ಸ್ಥಳೀಯ ಸಂಸ್ಕೃತಿ ಕುರಿತು ಅರಿವು ಮೂಡಿಸುವ ಶೈಕ್ಷಣಿಕ ಚಟುವಟಿಕೆ ಮತ್ತು ಅಧ್ಯಯನ ಕೇಂದ್ರವಾಗಿ ಕೂಡ ಅಭಿವೃದ್ಧಿಯಾಗುತ್ತಿದೆ. ಜಂಬಿಟ್ಟಿಗೆ ಕಲ್ಲಿನಿಂದ ಕೂಡಿದ ಬರಡು ಭೂಮಿಯಾಗಿದ್ದ ಪಿಲಿಕುಳ ಈಗ ಹಸಿರಿನಿಂದ ಕಂಗೊಳಿಸುತ್ತಿದೆ. ಲೋಬೋ ಅವರ ವೃತ್ತಿ ಜೀವನದ ಬಹುದೊಡ್ಡ ಸಾಧನೆ ಇದಾಗಿದ್ದು, ಯೋಜನೆಯಲ್ಲಿ ನಿರಂತರ ಪರಿಶ್ರಮ ಪಟ್ಟು ಅಭಿವೃದ್ಧಿ ಮಾಡಿದ್ದಾರೆ.

ತಹಸೀಲ್ದಾರ್, ಸಹಾಯಕ ಆಯುಕ್ತ, ಕೇಂದ್ರ ಸ್ಥಾನೀಯ ಸಹಾಯಕರಾಗಿ

ಯುವ ತಹಸೀಲ್ದಾರ್ ಆಗಿದ್ದಾಗ ಲೋಬೋ ಅವರು ಬಡವರು ಮತ್ತು ಸಮಾಜದ ಕಟ್ಟಕಡೆಯ ಮಂದಿಯ ಸಮಸ್ಯೆಗಳನ್ನು ಪರಿಹರಿಸಲು ಹೆಚ್ಚಿನ ಪ್ರಯತ್ನ ನಡೆಸುತ್ತಿದ್ದರು. ಸಾವಿರಾರು ಮಂದಿ ಬಡ ಕೃಷಿಕರಿಗೆ ಅವರ ಸ್ವಾಧೀನದಲ್ಲಿದ್ದ ಕೃಷಿ ಭೂಮಿಯನ್ನು ಹಂಚುವ ಕೆಲಸವನ್ನು ಲೋಬೋ ವಿಶೇಷ ಮುತುವರ್ಜಿಯಿಂದ ನಡೆಸಿದ್ದರು. ಹಕ್ಕುಪತ್ರ ಪಡೆದ ರೈತರ ಮುಖದಲ್ಲಿ ಮೂಡಿದ ಖುಷಿ ಲೋಬೋ ಅವರಲ್ಲಿ ಧನ್ಯತಾಭಾವ ಮೂಡಿಸಿತ್ತು. ಲೋಬೋ ಅವರ ಈ ಕಾರ್ಯಕ್ಷಮತೆಯನ್ನು ಗಮನಿಸಿ ಅಂದಿನ ಮುಖ್ಯಮಂತ್ರಿ ಗುಂಡೂರಾವ್ ಅವರು ಸೋಮವಾರಪೇಟೆ ತಾಲೂಕಿನ ತಹಸೀಲ್ದಾರ್ (1981 – 1985) ಆಗಿ ಆಯ್ಕೆ ಮಾಡಿದ್ದರು. ತಹಸೀಲ್ದಾರ್ ಆಗಿ ಲೋಬೋ ಸಾರ್ವಜನಿಕರ ಪ್ರೀತಿಗೆ ಪಾತ್ರರಾಗಿ ಇತರರಿಂದ ಪ್ರಶಂಸೆ ಪಡೆದಿದ್ದರು.

ಕಂದಾಯ ಇಲಾಖೆಯ ಕಾನೂನು, ನಿಯಮಾವಳಿಗಳ ಬಗ್ಗೆ ಹೆಚ್ಚಿನ ಮಾಹಿತಿ ಹೊಂದಿರುವ ಲೋಬೋ ಅವರನ್ನು ಆಗಾಗ ಮೇಲಾಧಿಕಾರಿಗಳು ಸಂಪರ್ಕಿಸಿ ಕಾನೂನು ಸಲಹೆ ಪಡೆಯುತ್ತಿದ್ದರು. ತನ್ನ ಇಲಾಖಾ ಕಾರ್ಯವಲ್ಲದೆ ಕ್ರೀಡಾ ಕೂಟ, ಹಲವಾರು ಮೇಳಗಳ ಆಯೋಜನೆ, ರಂಗಮಂದಿರ ನಿರ್ಮಾಣಕ್ಕೆ ಸಂಪನ್ಮೂಲ ಸಂಗ್ರಹ ಅಭಿಯಾನ, ರೆಡ್ ಕ್ರಾಸ್ ಸೊಸೈಟಿ ಸ್ಥಾಪನೆ ಇತ್ಯಾದಿ ಹಲವರು ಸಾಮಾಜಿಕ ಕಾರ್ಯಗಳಲ್ಲಿ ಎತ್ತಿದ ಕೈ.

ಕಂದಾಯ ಇಲಾಖೆ ಅಧಿಕಾರಿಯಾಗಿ ದೀರ್ಘಕಾಲ ಕೆಲಸ ಮಾಡಿರುವ ಲೋಬೋ ಅವರು ಪರಿಸರ, ಅರಣ್ಯ ಮತ್ತು ಜೀವವೈವಿಧ್ಯ ಸಂರಕ್ಷಣೆಯಲ್ಲಿ ಆಸಕ್ತಿ ಹೊಂದಿದ್ದಾರೆ. ಸೋಮವಾರಪೇಟೆಯಲ್ಲಿ ತಹಸೀಲ್ದಾರ್ ಆಗಿದ್ದಾಗ

ಅಂದಾಜು ಹದಿಮೂರು ಸಾವಿರ ಎಕರೆ ಅರಣ್ಯ ಪ್ರದೇಶವನ್ನು ಮೀಸಲು ಅರಣ್ಯ ಮಾಡಲು ಶ್ರಮಿಸಿದ್ದರು. ಕೊಡಗು ಜಿಲ್ಲೆಯಲ್ಲಿ ಕಾವೇರಿ ನದಿ ದ್ವೀಪ ಪ್ರದೇಶವನ್ನು ಅರಣ್ಯ ಇಲಾಖೆಗೆ ವರ್ಗಾಯಿಸಿ ಸಂರಕ್ಷಣೆಗೆ ಕ್ರಮಕೈಗೊಂಡಿದ್ದರು. ಇಂದು ಕಾವೇರಿ ಧಾಮ ರಾಜ್ಯದ ಮತ್ತೊಂದು ಪ್ರವಾಸೋದ್ಯಮ ಕೇಂದ್ರವಾಗಿ ಜನಪ್ರಿಯವಾಗಿದೆ.

ನಗರಾಭಿವೃದ್ಧಿ ಅನುಭವಗಳು

ಕಂದಾಯ ಇಲಾಖೆಯಂತೆ ನಗರಾಭಿವೃದ್ಧಿ ವಿಚಾರದಲ್ಲು ಜೆ.ಆರ್.ಲೋಬೋ ಹೆಚ್ಚನ ಅನುಭವ ಹೊಂದಿದ್ದಾರೆ. ಅವರು ಕೊಪ್ಪ, ಸೋಮವಾರಪೇಟೆ, ಶುಂಠಿಕೊಪ್ಪ, ಕುಶಾಲನಗರ ಮತ್ತು ಶನಿವಾರ ಸಂತೆ ಪುರಸಭೆ ಮತ್ತು ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತಾಧಿಕಾರಿಯಾಗಿ ಕೂಡ ಕರ್ತವ್ಯ ನಿರ್ವಹಿಸಿದ್ದಾರೆ.

ಮಂಗಳೂರು ಮಹಾನಗರಪಾಲಿಕೆ ಆಯುಕ್ತರಾಗಿದ್ದಾಗ (1999-2003) 400 ಕೋಟಿ ವೆಚ್ಚದ ಏಡಿಬಿ ಸಾಲ ಆಧಾರಿತ ಕುಡ್ಸೆಂಪ್ ಯೋಜನಗೆ ಮಂಜೂರಾಗಿ ದೊರೆಯಲು ಪಾಲಿಕೆ ಸದಸ್ಯರ ಮನವೊಲಿಸುವಲ್ಲಿ ಲೋಬೋ ಯಶಸ್ವಿಯಾಗಿದ್ದರು.

ಕರ್ನಾಟಕ ನಗರಾಭಿವೃದ್ಧಿ ಮತ್ತು ಕರಾವಳಿ ಪರಿಸರ ನಿರ್ವಹಣೆ (ಕುಡ್ಸೆಂಪ್) ಯೋಜನೆಯಿಂದ ಮಂಗಳೂರು ನಗರದ ಕುಡಿಯುವ ನೀರು ಪೂರೈಕೆ, ಒಳಚರಂಡಿ ವ್ಯವಸ್ಥೆ, ಪ್ರಮುಖ ರಸ್ತೆಗಳು, ಮಳೆನೀರು ಚರಂಡಿ ಇತ್ಯಾದಿ ಗಣನೀಯ ಪ್ರಮಾಣದಲ್ಲಿ ಅಭಿವೃದ್ಧಿಯಾಗಿದೆ.

ಮಂಗಳೂರು ಮಹಾನಗರಪಾಲಿಕೆ ಆಯುಕ್ತರಾಗಿ ಮೊದಲ ಬಾರಿಗೆ ದೀರ್ಘಕಾಲ ಬಾಳಿಕೆಯ ಕಾಂಕ್ರೀಟ್ ರಸ್ತೆಗಳ ನಿರ್ಮಾಣಕ್ಕೆ ಚಾಲನೆ ನೀಡಿದ್ದು, ಇಂದು ಬಹುತೇಕ ರಸ್ತೆಗಳು ಕಾಂಕ್ರೀಟೀಕರಣಗೊಂಡಿವೆ. ದಕ್ಷ ಆಡಳಿತ ಕ್ರಮಗಳಿಂದ ಮಂಗಳೂರು ಮಹಾನಗರಪಾಲಿಕೆಯ ಆರ್ಥಿಕ ವ್ಯವಸ್ಥೆಯನ್ನು ಸುಧಾರಿಸಿದಲ್ಲದೆ ಪಾಲಿಕೆಯನ್ನು ಸಾಲಮುಕ್ತವನ್ನಾಗಿ ಮಾಡಿದರು. ನಗರದಲ್ಲಿ ನಗರನಿವಾಸಿಗಳ 45 ಸೊಸೈಟಿಗಳನ್ನು ರಚಿಸಿ ಮನೆ ಮನೆಯಿಂದ ಘನತ್ಯಾಜ್ಯ ಸಂಗ್ರಹಕ್ಕೆ ಕ್ರಮಕೈಗೊಂಡಿದ್ದರು.ನಗರದ ಸಮಗ್ರ ಅಭಿವೃದ್ಧಿಯಿಂದಾಗಿ 2003ರಲ್ಲಿ ಕಾಂಗ್ರೆಸ್ ಪಾರ್ಟಿ ಪಾಲಿಕೆಯ 60ರಲ್ಲಿ 45 ಸ್ಥಾನ ಗೆದ್ದು ಮೂರನೇ ಎರಡು ಬಹುಮತ ಪಡೆದುಕೊಂಡಿತ್ತು.

ಕರ್ನಾಟಕ ನಗರಾಭಿವೃದ್ಧಿ ಮತ್ತು ಕರಾವಳಿ ಪರಿಸರ ನಿರ್ವಹಣೆ ಯೋಜನೆಯ ಜಂಟಿ ಯೋಜನಾ ನಿರ್ದೇಶಕರಾಗಿ ಅಧಿಕಾರಿಯಾಗಿ ಕರಾವಳಿಯ ಮೂರು ಜಿಲ್ಲೆಗಳ ಹತ್ತು ಪಟ್ಟಣಗಳ ಅಭಿವೃದ್ಧಿಯ ಜವಾಬ್ದಾರಿಯನ್ನು ಆರು ವರ್ಷಗಳ ಕಾಲ ನಿರ್ವಹಿಸಿದ್ದಾರೆ. ಏಷ್ಯನ್ ಡೆವಲಪ್ ಮೆಂಟ್ ಬ್ಯಾಂಕ್ (ಎಡಿಬಿ) ಹತ್ತು ನಗರಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 900 ಕೋಟಿ ರೂಪಾಯಿ ದೇಣಿಗೆ ನೀಡಿತ್ತು. 250ಕ್ಕೂ ಹೆಚ್ಚು ಎಂಜಿನಿಯರುಗಳು, ವಿದೇಶಿ ಯೋಜನಾ ಸಲಹಾಗಾರರು ಸೇರಿದ್ದ ಯೋಜನೆಯನ್ನು ಯಶಸ್ವಿಯಾಗಿ ಲೋಬೋ ಅನುಷ್ಠಾನ ಮಾಡಿರುವುದು ವಿರಳ ಅನುಭವ.

ಕಾಂಗ್ರೆಸ್ಸಿಗನಾಗಿ ಲೋಬೋ

ಜೆ.ಆರ್.ಲೋಬೋ ನಿರಂತರ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆ ಹೊಂದಿರುವ ಕುಟುಂಬದ ಸದಸ್ಯರಾಗಿದಾರೆ. ಅವರ ಮಾವ ಶ್ರೀಯುತ ಏಲ್ಯಸ್ ಡಯಾಸ್ ಅವರು ಕೊಪ್ಪದಲ್ಲಿ ಪ್ರಮುಖ ಕಾಂಗ್ರೆಸ್ ಮುಖಂಡರಾಗಿದ್ದು, ಶ್ರೀಮತಿ ಇಂದಿರಾ ಗಾಂಧಿಯವರು ಚಿಕ್ಕಮಗಳೂರು ಲೋಕಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಿದಾಗ ಸಕ್ರಿಯರಾಗಿ ಪ್ರಚಾರದಲ್ಲಿ ತೊಡಗಿದ್ದರು ಡಯಾಸ್.

ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಅನಂತರ ಜೆ.ಆರ್.ಲೋಬೋ ಈಗ ನಿರಂತರವಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಂಪರ್ಕದಲ್ಲಿದ್ದಾರೆ. ಸಮಾಜದ ವಿವಿಧ ಸ್ತರಗಳ ಜನರಲ್ಲಿ ಸಂವಹನದಲ್ಲಿ ತೊಡಗಿರುವ ಲೋಬೋ ಈಗಾಗಲೇ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಪಕ್ಷದ ವೇದಿಕೆ ಮೂಲಕ ನಡೆಸಿದ್ದಾರೆ. ನಗರದ ಹಿಂದುಳಿದ ಪ್ರದೇಶ, ಪೌರ ಕಾರ್ಮಿಕರ ಕಾಲೋನಿಗಳು, ದಲಿತರು ವಾಸಿಸುವ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ಪೂರ್ಣಪ್ರಮಾಣದಲ್ಲಿ ಪಕ್ಷದ ಚಟುವಟಿಕೆ ಮತ್ತು ಸಮಾಜ ಸೇವೆಯಲ್ಲಿ ತೊಡಗುವ ಮೂಲಕ ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಅಕ್ಕಿ ವಿತರಣೆ ಕಾರ್ಯಕ್ರಮ ನಡೆಸಿರುವ ಲೋಬೋ ಅವರು ಈಗಾಗಲೇ 2500ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಅಕ್ಕಿ ವಿತರಿಸಿದ್ದಾರೆ.

ಜೆ.ಆರ್.ಲೋಬೋ ಅವರು ಸ್ವತ ಬಡಕುಟುಂಬದಿಂದ ಬಂದಿರುವುದರಿಂದ ಬಡವರ ಕಷ್ಟಮುಖಗಳ ಸ್ಪಷ್ಟ ಅರಿವು ಅವರಿಗಿದೆ. ಪದವಿಪೂರ್ವ ತರಗತಿ ತನಕ ಲೋಬೋ ಅವರು ಶಾಲೆಗಾಗಿ ಪ್ರತಿದಿನ ಬೆಳಗ್ಗೆ ಐದು ಕಿಲೋ ಮೀಟರ್, ಸಂಜೆ ಐದು ಕಿಲೋ ಮೀಟರು ನಡೆದು ಹೋಗಬೇಕಾಗಿತ್ತು.ಬಸ್ಸಿಗಾಗಿ ನೀಡಲು ಅವರಲ್ಲಿ ಹಣ ಇರುತ್ತಿರಲಿಲ್ಲ. ಮಂಗಳೂರಿನ ಪೂಜ್ಯ ಬಿಷಪ್ ಅವರ ನೆರವಿನಿಂದ ಪುತ್ತೂರಿನಲ್ಲಿ ಹಾಸ್ಟೆಲು ಸೇರಿ ಕಾಲೇಜು ಶಿಕ್ಷಣವನ್ನು ಕಷ್ಟಪಟ್ಟು ಪೂರೈಸಿದರು.

ಕಾಂಗ್ರೆಸ್ ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯವಾಗಿರುವ ಲೋಬೋ ಅವರು ಪಕ್ಷದ ವಾರ್ಡು ಸಮಿತಿಗಳ ಸದಸ್ಯರನ್ನು ಹುರಿದುಂಬಿಸಿ ಮತದಾರರ ಪಟ್ಟಿಗೆ ವ್ಯವಸ್ಥಿತವಾಗಿ ಸೇರ್ಪಡೆ ಮಾಡುವ ಕಾರ್ಯ ಮಾಡುತ್ತಿದ್ದಾರೆ. ಈಗಾಗಲೇ ಆರು ಸಾವಿರ ಮಂದಿ ಹೊಸ ಮತದಾರರ ಸೇರ್ಪಡೆ ಮಾಡಲಾಗಿದ್ದು, ಅವರು ಸಂಪೂರ್ಣ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಲಿದ್ದಾರೆ.

ಮಂಗಳೂರಿನಲ್ಲಿ ಜೆ.ಆರ್. ಲೋಬೋ ಅವರು 1999ರಲ್ಲಿ ಅಂದಿನ ಲೋಕಸಭಾ ಸದಸ್ಯ ಉಳ್ಳಾಲ ಶ್ರೀನಿವಾಸ ಮಲ್ಯ ಜನ್ಮ ಶತಮಾನೋತ್ಸವ ಸ್ಮಾರಕ ವಸ್ತುಪ್ರದರ್ಶನವನ್ನು ಯಶಸ್ವಿಯಾಗಿ ಆಯೋಜಿಸಿದ್ದರು. ವಸ್ತುಪ್ರದರ್ಶನದಲ್ಲಿ ಸಂಗ್ರಹವಾದ 35 ಲಕ್ಷ ರೂಪಾಯಿ ನಿಧಿಯಿಂದ ಸುರತ್ಕಲ್ ಪೇಟೆಯಲ್ಲಿ ಕಾಂಗ್ರೆಸ್ ಭವನ ನಿರ್ಮಿಸಲಾಗಿದೆ.