ಮಂಗಳೂರು: ನೇತ್ರಾವತಿ ಸೇತುವೆಯಿಂದ ನದಿ ಬದಿಯಲ್ಲಿ ಮಂಗಳೂರು ಹಳೆ ಬಂದರು, ಸುಲ್ತಾನ್ ಬತ್ತೇರಿ, ತಣ್ಣೀರುಬಾವಿಯಾಗಿ ನವಮಂಗಳೂರು ಬಂದರಿಗೆ ಪರ್ಯಾಯ ಹೆದ್ದಾರಿ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು.

ಅವರು ಮಲ್ಲಿಕಟ್ಟೆ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡುತ್ತಾ ಈ ಯೋಜನೆಗೆ ಸುಮಾರು 1000 ಕೋಟಿ ರೂಪಾಯಿ ಹೂಡಿಕೆಯಾಗಲಿದೆ ಎಂದರು.

ಸುಲ್ತಾನ್ ಬತ್ತೇರಿಯಲ್ಲಿ ಸೇತುವೆಯನ್ನು ನಿರ್ಮಿಸಿ ತೂಗುಸೇತುವೆ ನಿರ್ಮಾಣವನ್ನು ಕೈಬಿಡಲು ಉದ್ದೇಶಿಸಲಾಗಿದೆ. ಸೇತುವೆ ನಿರ್ಮಾಣವಾದರೆ ತೂಗುಸೇತುವೆಯ ಅಗತ್ಯವಿರುವುದಿಲ್ಲ ಎಂದ ಅವರು ಈ ರಸ್ತೆಯನ್ನು ಬಹುಪಯೋಗಿಯ ರಸ್ತೆಯನ್ನು ಮಾಡುವ ಉದ್ದೇಶವಿದೆ ಎಂದರು.

ಇಲ್ಲಿ ರಸ್ತೆಯಾದರೆ ಮಂಗಳೂರು ಹಳೆ ಬಂದರಿನಲ್ಲಿ ಮೀನುಗಾರಿಕೆ ಪ್ರಗತಿ ಸಾಧ್ಯವಿದೆ, ಪ್ರವಾಸೋದ್ಯಮವೂ ಬೆಳೆಯಲು ಅವಕಾಶವಾಗುವುದು, ಜೊತೆಗೆ ವಾಹನಗಳ ದಟ್ಟಣಿಯೂ ಕಡಿಮೆಯಾಗಲಿದೆ ಎಂದು ಶಾಸಕ ಜೆ.ಆರ್.ಲೋಬೊ ಅವರು ವಿವರಿಸಿದರು.

ಈ ರಸ್ತೆಯ ಬಗ್ಗೆ ಸರ್ವೇ, ಅಂದಾಜು ತಯಾರಿಯಲು ಕನ್ಸಲ್ ಟೆಂಟ್ ನೇಮಕಮಾಡಿ 2.5 ಕೋಟಿ ರೂಪಾಯಿಯನ್ನು ಒದಗಿಸಲಾಗಿದೆ. ಈ ಸರ್ವೇ, ಅಂದಾಜು ಸಿದ್ದಪಡಿಸುವ ಕೆಲಸವನ್ನು ಕನ್ಸಲ್ ಟೆಂಟ್ ಗೆ ಒಪ್ಪಿಸಲಾಗಿದೆ ಎಂದರು.

ಇದೇ ರೀತಿಯಲ್ಲಿ ನೇತ್ರಾವತಿ ಸೇತುವೆಯಿಂದ ನದಿ ತೀರದಲ್ಲಿ ಕಣ್ಣೂರು ಮಸೀದಿವರೆಗೆ ಪರ್ಯಾಯ ರಸ್ತೆ ನಿರ್ಮಿಸಿ ಈ ಎರಡೂ ರಸ್ತೆಗಳೂ ಮಂಗಳೂರಿನ ಚಿತ್ರಣವನ್ನೇ ಬದಲಾಯಿಸುತ್ತವೆ ಎಂದು ಶಾಸಕ ಜೆ.ಆರ್.ಲೋಬೊ ಅವರು ತಿಳಿಸಿದರು.

ಸಭೆಯಲ್ಲಿ ಮಂಗಳೂರು ಮಹಾನಗರಪಾಲಿಕೆಯ ಉಪಆಯುಕ್ತ (ಅಭಿವೃದ್ಧಿ) ಕೆ.ಎಸ್.ಲಿಂಗೇಗೌಡ, ಲೋಕೋಪಯೋಗಿ ಇಲಾಖೆ ಮತ್ತು ಇನ್ನಿತರ ಅಧಿಕಾರಿಗಳಿದ್ದರು.