ಮಂಗಳೂರು: ನಗರ ಆರೋಗ್ಯ ಕೇಂದ್ರಗಳು ಸರಿಯಾಗಿ ಕೆಲಸ ಮಾಡುವಂತೆ ವ್ಯವಸ್ಥೆಗಳನ್ನು ಮಾಡಬೇಕು ಎಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು.
ಅವರು ಇಂದು ಕದ್ರಿಯಲ್ಲಿರುವ ತಮ್ಮ ಕಚೇರಿಯಲ್ಲಿ ನಗರ ಆರೋಗ್ಯ ಕೇಂದ್ರಗಳ ಪರಿಣಾಮಕಾರಿ ವ್ಯವಸ್ಥೆಯ ಕುರಿತು ವಿಚಾರ ವಿನಿಮಯ ಸಭೆ ನಡೆಸಿ ಮಾತನಾಡುತ್ತಿದ್ದರು. ನಗರದಲ್ಲಿ 7 ಆರೋಗ್ಯ ಕೇಂದ್ರಗಳು ಕಾರ್ಯಾಚರಿಸುತ್ತಿವೆ. ಜೆಪ್ಪು, ಕಸಬ ಬೆಂಗ್ರೆ, ಶಕ್ತಿನಗರ, ಕದ್ರಿ ಲೇಡಿಹಿಲ್, ಬಂದರ್, ಪಡೀಲ್ ಹಾಗೂ ಎಕ್ಕೂರು ಕೇಂದ್ರಗಳು. ಈ ಪೈಕಿ 4 ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲದ. ಈ ಕೇಂದ್ರಗಳಿಗೆ ಸರ್ಕಾರಿ ಭೂಮಿಯನ್ನು ಒದಗಿಸಬೇಕು.ಅದಕ್ಕೆ ಬೇಕಾದ ಕ್ರಮ ತೆಗೆದುಕೊಳ್ಳುವಂತೆ ತಹಶೀಲ್ದಾರ್ ಅವರಿಗೆ ಸೂಚಿಸಿದರು.

ಈ ಆರೋಗ್ಯ ಕೇಂದ್ರಗಳಿಗೆ ತಲಾ 45 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದ್ದು ಕೂಡಲೇ ಅನುದಾನವನ್ನು ಬಿಡುಗಡೆ ಮಾಡಿಸಲು ತಾವು ಖುದ್ದು ಸರ್ಕಾರಿ ಮಟ್ಟದಲ್ಲಿ ಮತನಾಡುವುದಾಗಿ ಶಾಸಕರು ಭರವಸೆ ನೀಡಿದರು. ಆರೋಗ್ಯ ಕೇಂದ್ರಗಳ ಭೂಮಿ ಪೂಜೆಗೆ ಖುದ್ದಾಗಿ ಆರೋಗ್ಯ ಸಚಿವರನ್ನು ಅಕ್ಟೋಬರ್ ತಿಂಗಳಲ್ಲಿ ಆಹ್ವಾನಿಸುವುದಾಗಿ ತಿಳಿಸಿದ ಅವರು ಅದಕ್ಕೂ ಮೊದಲು ಈ ಆರೋಗ್ಯ ಕೇಂದ್ರಗಳ ಬಗ್ಗೆ ಏನೆಲ್ಲ ಕ್ರಮ ಕೈಗೊಳ್ಳಲಾಗಿದೆ ಎನುವುದನ್ನು ಪರಿಶೀಲಿಸಲು ಅಕ್ಟೋಬರ್ 24 ರಂದು ಸಭೆ ನಡೆಸುವುದಾಗಿ ತಿಳಿಸಿದರು.

ಸಭೆಯಲ್ಲಿದ್ದ ಅಧಿಕಾರಿಗಳು ಉತ್ತರಿಸಿ ಈಗಾಗಲೇ ಆರೋಗ್ಯ ಕೇಂದ್ರಗಳು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತಿವೆ. ಸಣ್ಣಪುಟ್ಟ ಸಮಸ್ಯೆಗಳಿದ್ದು ಅವುಗಳನ್ನು ಸರಿಪಡಿಸಬೇಕಾಗಿದೆ ಎಂದರು. ಆರೋಗ್ಯ ಸಹಾಯಕರ ಹುದ್ದೆಗಳು 53 ಬಾಕಿ ಇದ್ದು ಇವುಗಳನ್ನು ಭರ್ತಿಮಾಡಲು ಮದುವೆಯಾಗಿರುವ, ಎಸ್ ಎಸ್ ಎಲ್ ಸಿ ಆಗಿರುವ ಮತ್ತು ಸ್ಥಳೀಯರೇ ಆಗಿರುವವರನ್ನು ಕರೆದು ಆಯ್ಕೆ ಮಾಡುವಂತೆಯೂ ಶಾಸಕ ಜೆ.ಆರ್.ಲೋಬೊ ತಿಳಿಸಿ ಅವರಿಗೆ ಮಾಸಿಕ 5 ಸಾವಿರ ಸಂಬಳ ಮತ್ತು ಭತ್ತೆಯನ್ನು ಸರ್ಕಾರ ನಿಗದಿ ಪಡಿಸಿದೆ ಎಂದರು.

ಈ ಸಭೆಯಲ್ಲಿ ಕಂದಾಯ ಅಧಿಕಾರಿಗಳು, ನಗರ ಪಾಲಿಕೆ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಈ ಆರೋಗ್ಯ ಕೇಂದ್ರಗಳ ವ್ಯಾಪ್ತಿಯ ಕಾರ್ಪೊರೇಟರ್ ಗಳಿದ್ದರು.