ಮಂಗಳೂರು: ನಂದಿಗುಡ್ಡೆ ಸ್ಮಶಾನದಲ್ಲಿ ಎಲ್ಲಾ ರೀತಿಯ ಮೂಲಭೂತ ಆವಶ್ಯಕತೆಗಳನ್ನೂ ಪೂರೈಸುವಂತೆ ಶಾಸಕ ಜೆ.ಆರ್.ಲೋಬೊ ಅವರು ಸೂಚಿಸಿದರು. ಅವರು ನಿನ್ನೆ ಕದ್ರಿಯಲ್ಲಿರುವ ತಮ್ಮ ಕಚೇರಿಯಲ್ಲಿ ನಂದಿಗುಡೆ ಸ್ಮಶಾನ ಸಮಿತಿಯ ಸಭೆ ನಡೆಸಿ ಇದೀಗ ನಂದಿಗುಡ್ಡೆ ಸ್ಮಶಾನದಲ್ಲಿ ಆಗುತ್ತಿರುವ ರಿನವೇಶನ್ ಕುರಿತು ಪ್ರಗತಿ ಪರಿಶೀಲಿಸಿದರು.

ನಂದಿಗುಡ್ಡೆ ಸ್ಮಶಾನದಲ್ಲಿ ಜನರಿಗೆ ಕುಳಿತುಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಬೇಕು. ಬೆಂಚ್ ಗಳನ್ನು ಒದಗಿಸಿ ಜನರು ಕುಳಿತು ಕೊಳ್ಳಲು ಅವಕಾಶ ಕಲ್ಪಿಸುವಂತೆ ತಿಳಿಸಿ ರಾತ್ರಿ ಹೊತ್ತು ಸ್ಮಶಾನಕ್ಕೆ ಬಂದರೆ ಅನುಕೂಲವಾಗುವಂತೆ ಜನರೇಟರ್ ವ್ಯವಸ್ಥೆ ಒದಗಿಸುವಂತೆಯೂ ಸೂಚಿಸಿದರು.

ಸ್ಮಶಾನದ ಪರಿಸರದಲ್ಲಿ ಒಳಗೆ ಮತ್ತು ಹೊರಗೆ ಸುಂದರೀಕರಣ ಮಾಡುವಂತೆ ತಿಳಿಸಿದ ಶಾಸಕ ಜೆ.ಆರ್.ಲೋಬೊ ಇಲ್ಲಿಗೆ ತರುವ ಹೂವು ಮತ್ತಿತರ ತ್ಯಾಜ್ಯ ವಸ್ತುಗಳನ್ನು ಸಾಗಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಈ ಪರಿಸರದಲ್ಲಿ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿ ಸಂಚಾರ ವ್ಯವಸ್ಥೆಯನ್ನು ಜಾಮ್ ಮಾಡಲು ಬಿಡಬಾರದು. ಈ ಭಾಗದಲ್ಲಿ ಟಾಯ್ ಲೆಟ್, ಕುಡಿಯುವ ನೀರು ಮುಂತಾದ ಆವಶ್ಯಕತೆಗಳನ್ನು ಪೂರೈಸುವಂತೆಯೂ ಅವರು ತಿಳಿಸಿದರು.

ನಂದಿಗುಡ್ಡೆ ಸ್ಮಶಾನ ಸಮಿತಿ ಹೆಚ್ಚು ಕ್ರಿಯಾಶೀಲವಾಗುವಂತೆ ತಿಳಿಸಿದ ಲೋಬೊ ಅವರು ಕಟ್ಟಿಗೆ ಸಂಗ್ರಹಣೆ ಮಾಡಲು ಸೂಕ್ತ ಶೆಡ್ ನಿರ್ಮಿಸುವಂತೆಯೂ ಸೂಚಿಸಿದರು. ನಂದಿಗುಡ್ಡೆ ಸ್ಮಶಾನ ಸಮಿತಿಯಲ್ಲಿ ಕಾರ್ಪೊರೇಟರ್ ಗಳು ಹಾಗೂ ಸ್ಥಳೀಯರು ಹಾಜರಿದ್ದರು.