ಮಂಗಳೂರು: ಸ್ಮಶಾನಕ್ಕೆ ನಿಗದಿಯಾದ 74 ಲಕ್ಷ ರೂಪಾಯಿ ಹಣದಲ್ಲಿ ನಂದಿಗುಡ್ಡೆ ಸ್ಮಶಾನವನ್ನು ಮಾದರಿ ಸ್ಮಶಾನವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು.

ಇಂದು ಬೆಳಿಗ್ಗೆ ಶಾಸಕ ಜೆ.ಆರ್.ಲೋಬೊ ಅವರು ನಗರಪಾಲಿಕೆ ಅಧಿಕಾರಿಗಳು ಮತ್ತು ಕಾರ್ಪೊರೇಟರ್ ಜೊತೆ ಸ್ಮಶಾನಕ್ಕೆ ಭೇಟಿ ನೀಡಿ ಅಭಿವೃದ್ಧಿ ಕೆಲಸಗಳ ಬಗ್ಗೆ ವಿಚಾರ ವಿಮರ್ಶೆ ಮಾಡಿದರು.
ಮೂಲಭೂತವಾಗಿ ಸ್ಮಶಾನಕ್ಕೆ ಬರುವವರಿಗೆ ಸುಂದರವಾಗಿ ಕಾಣಿಸಬೇಕು. ಅದಕ್ಕಾಗಿ ಇಲ್ಲಿನ ಸ್ವಚ್ಛತೆಯನ್ನು ಕಾಯಂ ಆಗಿ ಕಾಪಾಡುವಂತೆ ಸಲಹೆ ನೀಡಿದರು.

ಹುಲ್ಲನ್ನು ತಿಂಗಳಿಗೊಮ್ಮೆ ತೆಗೆದು ಶುದ್ಧಗೊಳಿಸಬೇಕು. ವಾಹನ ನಿಲುಗಡೆ ಮತ್ತು ಸುವ್ಯವಸ್ಥಿತವಾಗಿ ತಿರುಗಡುವ ವ್ಯವಸ್ಥೆ ಮಾಡಬೇಕು. ಕುಡಿಯುವ ನೀರು, ಕೈ, ಕಾಲು ತೊಳೆದುಕೊಳ್ಳುವುದಕ್ಕೆ ಕೂಡಾ ಓವರ್ ಹೆಡ್ ಟ್ಯಾಂಕ್ ನಿರ್ಮಿಸಬೇಕು. ದಾರಿ ದೀಪದ ವ್ಯವಸ್ಥೆ, ಹೈಮಾಸ್ ಲೈಟ್ ಅಳವಡಿಸಬೇಕು ಎಂದರು.

ಶವಗಳನ್ನು ಸುಡಲು 6 ಸಿಲಿಕಾನ್ ವ್ಯವಸ್ಥೆ ಇದ್ದು ಇನ್ನೂ ನಾಲ್ಕು ಸಿಲಿಕಾನ್ ಗಳನ್ನು ಅಳವಡಿಸಬೇಕು. ದಾರಿ ವ್ಯವಸ್ಥೆಯನ್ನು ಮಾಡಬೇಕು. ಜನರೇಟರ್, ಸೌದೆ ಇಡುವ ವ್ಯವಸ್ಥೆಯನ್ನು ಮಾಡಬೇಕು ಎಂದು ತಿಳಿಸಿದರು.

ಈ ಸ್ಮಶಾನವನ್ನು ಸುಂದರವಾಗಿ ಮಾಡುವ ದೃಷ್ಟಿಯಿಂದ ಲ್ಯಾಂಡ್ ಸ್ಕೇಪ್ ಅನ್ನೂ ಕೂಡಾ ಮಾಡಿದರೆ ಇದು ಮಾದರಿಯಾಗಲಿದೆ. ಅಧಿಕಾರಿಗಳು ಇದರ ಕೆಲಸ ನಿರ್ವಹಿಸುವಾಗ ಪರಿಣಾಮಕಾರಿಯಾಗಿ ಮತ್ತು ಸೌಂದರ್ಯಕ್ಕೆ ಯಾವುದೇ ಲೋಪವಾಗದಂತೆ ನಿಗಾವಹಿಸಬೇಕು ಎಂದೂ ಶಾಸಕ ಜೆ.ಆರ್.ಲೋಬೊ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಮಂಗಳೂರು ಮಹಾನಗರದ ಸ್ಥಾಯಿ ಸಮಿತಿ ಅಧ್ಯಕ್ಷ ಲ್ಯಾನ್ಸಿ ಲಾರ್ಟ್ ಪಿಂಟೊ, ನಗರ ಪಾಲಿಕೆ ಸದಸ್ಯರಾದ ಶೈಲಜಾ, ಜೆಸಿಂತ ಅಲ್ಫ್ರೆಡ್, ಪ್ರೇಮಾನಂದ ಶೆಟ್ಟಿ, ದಿವಾಕರ, ರತಿಕಲಾ, ಕವಿತಾ ವಾಸು, ಕೇಶವ ಮರೋಳಿ, ಪಾಲಿಕೆಯ ಕಮಿಷನರ್ ಮಹಮ್ಮದ್ ನಜೀರ್, ಇಂಜಿನಿಯರ್ ಲಿಂಗೇಗೌಡ, ಬ್ಲಾಕ್ ಅಧ್ಯಕ್ಷ ಕೆ.ಬಾಲಕೃಷ್ಣ ಶೆಟ್ಟಿ ಮತ್ತು ಇತರರಾದ ಟಿ.ಕೆ. ಸುಧೀರ್, ಸದಾಶಿವ ಅಮೀನ್, ನಮಿತಾ ರಾವ್ , ವಿಜಯಲಕ್ಷ್ಮಿ, ಜಯಂತ ಪೂಜಾರಿ, ಸುರೇಶ್ ಶೆಟ್ಟಿ, ರಮಾನಂದ ಪೂಜಾರಿ, ಜನಾರ್ದನ ಇದ್ದರು.