ಮಂಗಳೂರು: ನಂತೂರು ವೃತ್ತದ ಕಾಮಗಾರಿಗೆ ಮುಖ್ಯಮಂತ್ರಿಗಳು 60 ಲಕ್ಷ ರೂಪಾಯಿ ನೀಡಿದ್ದು ಈ ಕೆಲಸವನ್ನು ಮುಂದಿನ ಜನವರಿಯಲ್ಲಿ ಆರಂಭಿಸಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು.

ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ ಈ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು ಡಿಸೆಂಬರ್ 24 ಕ್ಕೆ ಟೆಂಡರ್ ತೆಗೆದು ತಕ್ಷಣ ಕಾಮಗಾರಿಯನ್ನು ಒಪ್ಪಿಸಲಾಗುವುದು ಎಂದರು.

ರಾಜ್ಯ ಸರ್ಕಾರದ ವತಿಯಿಂದ ಇಲ್ಲಿ ಬಸ್ ನಿಲ್ದಾಣ ತೆರವು ಮಾಡಿಸಿ ವ್ಯವಸ್ಥಿತವಾಗಿ ಬಸ್ ಗಳು ನಿಲ್ಲುವುದಕ್ಕೆ ಮತ್ತು ಪ್ರಯಾಣಿಕರು ಬಸ್ ಹತ್ತುವುದಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದರು.

ಈ ವೃತ್ತದ ಬಗ್ಗೆ ಕೇಂದ್ರ ಸರ್ಕಾರ ಏನೂ ಕ್ರಮ ತೆಗೆದುಕೊಳ್ಳುತ್ತದೆ ಎಂಬುದು ಗೊತ್ತಿಲ್ಲ ಮತ್ತು ಅವರು ಯಾವಾಗ ಕೆಲಸ ಆರಂಭಿಸುತ್ತಾರೆ ಎಂಬ ಬಗ್ಗೆಯೂ ಮಾಹಿತಿ ಇಲ್ಲ ಎಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು.