ಮಂಗಳೂರು: ಮುಖ್ಯಮಂತ್ರಿಗಳ ವಿಶೇಷ ಅನುದಾನವಾಗಿ ದಕ್ಷಿಣ ವಿಧಾನ ಸಭಾ ವ್ಯಾಪ್ತಿಗೆ 12.5 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಾರೆ ಎಂದು ಶಾಸಕ ಜೆ.ಆರ್.ಲೋಬೊ ಅವರು ತಿಳಿಸಿದರು.

ಅವರು ಮಲ್ಲಿಕಟ್ಟೆಯಲ್ಲಿರುವ ತಮ್ಮ ಕಚೇರಿಯಲ್ಲಿ ಕಾರ್ಪೊರೇಟರ್ ಗಳನ್ನುದ್ದೇಶಿಸಿ ಮಾತನಾಡುತ್ತಿದ್ದರು. ಈ ಅನುದಾನದ ಪೈಕಿ 10 ಕೋಟಿ ರೂಪಾಯಿ ಸಾಮಾನ್ಯವಾಗಿದ್ದು ಉಳಿದ 2.5 ಕೋಟಿ ರೂಪಾಯಿಯನ್ನ್ನು ಅಲ್ಪಸಂಖ್ಯಾತರಿಗೆ ಬಿಡುಗಡೆ ಮಾಡಿದ್ದಾರೆ ಎಂದರು.

ಈ ಅನುದಾನವನ್ನು ರಸ್ತೆಗಳಿಗೆ ಡಾಮರು ಹಾಕಲು ಬಳಕೆ ಮಾಡಿಕೊಳ್ಳಬೇಕಾಗಿದೆ. ಡಾಮರು ರಸ್ತೆಯನ್ನು ಮಾತ್ರ ಮಾಡಬೇಕಾಗಿದೆ ಬೇರೆ ಉದ್ದೇಶಕ್ಕೆ ಬಳಸುವಂತಿಲ್ಲ ಮತ್ತು ರಸ್ತೆ ಕಾಂಕ್ರೀಟಿಕರಣಕ್ಕೆ ವಿನಿಯೋಗಿಸುವಂತಿಲ್ಲ. 2.5 ಕೋಟಿ ರೂಪಾಯಿ ಅಲ್ಪಸಂಖ್ಯಾತರು ವಾಸಿಸುವ ಪ್ರದೇಶಗಳ ರಸ್ತೆ ಡಾಮರೀಕರಣಕ್ಕೆ ಮಾತ್ರ ಬಳಸಬೇಕು ಎಂದು ಶಾಸಕ ಜೆ.ಆರ್.ಲೋಬೊ ಅವರು ವಿವರಿಸಿದರು.

ಕಾರ್ಪೊರೇಟರ್ ಗಳು ಈ ಅನುದಾನವನ್ನು ಅಗತ್ಯವಿದ್ದಲ್ಲಿಗೇ ಬಳಸಿಕೊಳ್ಳಬೇಕು. ಕಾರ್ಪೊರೇಟರ್ ಗಳು ಅನುದಾನ ಬಳಸಿಕೊಳ್ಳುವ ಬಗ್ಗೆ ಮುಂಚಿತವಾಗಿ ಪಟ್ಟಿ ಕೊಡಬೇಕು ಎಂದು ನುಡಿದ ಅವರು ಕಾರ್ಪೊರೇಟರಗಳು ತಮ್ಮ ವಾರ್ಡ್ ಅಧ್ಯಕ್ಷರೊಂದಿಗೆ ಚರ್ಚಿಸಿ, ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಯಾರ ವಾರ್ಡ್ ಗೆ ಅಗತ್ಯವಿದೆ ಎಂಬುದನ್ನು ತಿಳಿದುಕೊಂಡು ಪಟ್ಟಿ ತಯಾರಿಸುವಂತೆ ಸೂಚಿಸಿದರಲ್ಲದೇ ಈ ಅನುದಾನ ಪ್ರತೀ ವಾರ್ಡ್ ಗೆ ಹಂಚುವಾಗ ಆದ್ಯತೆ ಮತ್ತು ಅಲ್ಪಸಂಖ್ಯಾತರನ್ನು ನೋಡಿಕೊಳ್ಳಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಕಾರ್ಪೊರೇಟರ್ ಗಳು, ವಾರ್ಡ್ ಅಧ್ಯಕ್ಷರು, ನಾಯಕರು ಉಪಸ್ಥಿತರಿದ್ದರು.