ಬೆಂಗಳೂರು: ಮಂಗಳೂರಿಗೆ ಕುಡಿಯುವ ನೀರು ಸರಬರಾಜು ಮಾಡುವ ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರನ್ನು 5 ಮೀಟರ್ ಎತ್ತರಕ್ಕೆ ನಿಲ್ಲಿಸುವುದಕ್ಕೇ ಅಗತ್ಯವಾದ ಜಮೀನು ಸ್ವಾಧೀನಪಡಿಸಿಕೊಳ್ಳಬೇಕು ಎಂದು ಶಾಸಕ ಜೆ.ಆರ್.ಲೋಬೊ ಅವರು ಒತ್ತಾಯಿಸಿದರು.

ಅವರು ವಿಧಾನ ಸಭೆಯಲ್ಲಿ ಗಮನ ಸೆಳೆಯುವ ಸೂಚನೆ ಮೂಲಕ ವಿಷಯ ಮಂಡಿಸಿ ನಗರಾಭಿವೃದ್ಧಿ ಮತ್ತು ಹಜ್ ಖಾತೆ ಸಚಿವರನ್ನು ಒತ್ತಾಯಿಸಿದರು. ತುಂಬೆ ವೆಂಟೆಡ್ ಡ್ಯಾಮನ್ನು 7 ಮೀಟರ್ ಎತ್ತರಕ್ಕೆ ನಿಲ್ಲಿಸಲು ಕೆಲಸ ಪೂರ್ಣಗೊಳಿಸಲಾಗಿದೆ. ಆದರೆ ಇದರಲ್ಲಿ 4 ಮೀಟರ್ ಎತ್ತರಕ್ಕೆ ಮಾತ್ರ ನೀರು ನಿಲ್ಲಿಸಬಹುದಾಗಿದೆ.4 ಮೀಟರ್ ಗಿಂತ ಜಾಸ್ತಿ ನೀರು ನಿಲ್ಲಿಸಬೇಕಾಗಿದ್ದಲ್ಲಿ ನದಿ ಇಕ್ಕೆಲ್ಲಗಳಲ್ಲಿರುವ ಅಗತ್ಯ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

ಈ ವರ್ಷ ಕೇವಲ 4 ಮೀಟರ್ ನೀರು ನಿಲ್ಲಿಸಿದರೆ ಮಂಗಳೂರಿಗೆ ಕುಡಿಯುವ ನೀರಿನ ಅಭಾವ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ತುಂಬೆ ವೆಂಟೆಡ್ ಡ್ಯಾಮನ್ನು 5 ಮೀಟರ್ ತನಕ ನೀರು ನಿಲ್ಲಿಸಲು ಈಗಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.