ಮಂಗಳೂರು: ಕದ್ರಿ ಪಾರ್ಕ್ ಸಂಗೀತ ಕಾರಂಜಿ ಬಹುತೇಕ ಪೂರ್ಣಗೊಂಡಿದ್ದು ಶೀಘ್ರದಲ್ಲೇ ಮುಖ್ಯಮಂತ್ರಿ, ಪ್ರವಾಸೋದ್ಯನ ಸಚಿವರು ಅಥವಾ ನಗರಾಭಿವೃದ್ಧಿ ಸಚಿವರಿಂದ ಲೋಕಾರ್ಪಣೆ ಮಾಡಿಸಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು.

ಅವರು ಇಂದು ಕರ್ದಿ ಪಾರ್ಕ್ ಸಂಗೀತ ಕಾರಂಜಿಯನ್ನು ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಮೂಡಾದವರು ಈ ಸಂಗೀತ ಕಾರಂಜಿಯನ್ನು ಸುಂದರವಾಗಿ ಮಾಡಿದ್ದು ಸಣ್ಣಪುಟ್ಟ ಸಮಸ್ಯೆಗಳಿದ್ದವು ಅವುಗಳನ್ನು ಬಗೆಹರಿಸಲಾಗಿದೆ ಎಂದರು.

ನೀರಿನ ಸಮಸ್ಯೆ ಇತ್ತು, ಇದನ್ನೂ ಕೂಡಾ ಬಗೆಹರಿಸಲಾಗುತ್ತಿದೆ. ನೋಡಲು ಸುಂದರವಾಗಿ ಕಾಣುವಂತೆ ಮಾಡಬೇಕು, ಆ ಕಾರಣಕ್ಕೆ ಸ್ವಲ್ಪ ವಿಳಂಭವಾಗಿದೆ ಎಂದ ಅವರು ಹಾಗೆಂದು ಬೇಕಾಬಿಟ್ಟಿ ಮಾಡಲಾಗದು, ವ್ಯವಸ್ಥಿತವಾಗಿರಬೇಕು ಎಂಬ ಕಾರಣಕ್ಕೆ ಕಾಮಗಾರಿಯನ್ನು ಸುಸಜ್ಜಿತವಾಗಿ ಮುಗಿಸಬೇಕೆಂದು ಮೂಡಾಕ್ಕೆ ಹೇಳಿದ್ದಾಗಿ ತಿಳಿಸಿದರು.

ಶಾಸಕ ಜೆ.ಆರ್.ಲೋಬೊ ಅವರು ಖುದ್ದಾಗಿ ಸ್ಥಳ ಪರಿಶೀಲಿಸಿ ಅಲ್ಲಿ ಪಾರ್ಕ್ ವ್ಯವಸ್ಥೆ ಮಾಡುವಂತೆ ತಿಳಿಸಿ ಇದನ್ನು ನಿರ್ವಹಣೆ ಮಾಡುವವರು ಇಲ್ಲಿ ಶುಚಿತ್ವಕ್ಕೆ ಹೆಚ್ಚಿನ ಒತ್ತುಕೊಡಬೇಕು ಎಂದು ಹೇಳಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಜೆ.ಆರ್.ಲೋಬೊ ಅವರು ಮುಖ್ಯಮಂತ್ರಿಗಳಿಗಾಗಿಯೇ ಕಾಯುವುದಿಲ್ಲ. ಎಲ್ಲವೂ ಪರಿಪೂರ್ಣ ಎಂದು ಅನ್ನಿಸಿದಾಗ ಲೋಕಾರ್ಪಣೆ ಮಾಡುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಮೂಡಾ ಆಯುಕ್ತರಾದ ಶ್ರೀಕಾಂತ್, ಮಾಜಿ ಮೇಯರ್ ಮಹಾಬಲ ಮಾರ್ಲ, ಗುತ್ತಿಗೆದಾರ ಪ್ರಭಾಕರ್ ಯೆಯ್ಯಾಡಿ ಹಾಗೂ ಅಧಿಕಾರಿಗಳಿದ್ದರು.

ಕದ್ರಿ ಸಂಗೀತ ಕಾರಂಜಿ ಶೀಘ್ರ ಲೋಕಾರ್ಪಣೆ : ಶಾಸಕ ಜೆ.ಆರ್.ಲೋಬೊ