ಮಂಗಳೂರು: ಕದ್ರಿ ಉದ್ಯಾನ ವನದಲ್ಲಿ ಸುಮಾರು 5 ಕೋಟಿ ರೂಪಾಯಿ ವೆಚ್ಚದಲ್ಲಿ ಸಂಗೀತ ಕಾರಂಜಿ ನಿರ್ಮಾಣ ಮಾಡಲಾಗುತ್ತಿದ್ದು ಇನ್ನೂ ಹೆಚ್ಚುವರಿಯಾಗಿ 50 ಲಕ್ಷ ರೂಪಾಯಿಯನ್ನು ವಿನಿಯೋಗಿಸಲಾಗುವುದು ಎಂದು ಶಾಸಕರಾದ ಜೆ.ಆರ್.ಲೋಬೊ ತಿಳಿಸಿದರು. ಅವರು ಕದ್ರಿಯಲ್ಲಿ ನಿರ್ಮಾಣವಾಗುತ್ತಿರುವ ಸಂಗೀತ ಕಾರಂಜಿಯನ್ನು ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಕಾಮಗಾರಿಯನ್ನು ಸಂಪೂರ್ಣ ಮಾಡಿ ಜನವರಿ ತಿಂಗಳಲ್ಲಿ ಉದ್ಘಾಟನೆ ಮಾಡಲಾಗುವುದು. ಈ ನಿಟ್ಟಿನಲ್ಲಿ ಕೆಲಸವನ್ನು ಭರದಿಂದ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಂಬಂಧಪಟ್ಟ ಎಲ್ಲ ಕೆಲಸಗಳನ್ನೂ ಪೂರ್ಣಮಾಡುವಂತೆ ಹೇಳಿದ ಅವರು ಈ ಸಂಗೀತ ಕಾರಂಜಿಯನ್ನು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಒದಗಿಸಬೇಕು. ಇದು ಮೈಸೂರಲ್ಲಿ ಇರುವ ಸಂಗೀತ ಕಾರಂಜಿಗಿಂತಲೂ ಚೆನ್ನಾಗಿ ಕಾಣಬೇಕು. ವಿದೇಶಿ ಪ್ರವಾಸಿಗರು ಕೂಡಾ ಇಲ್ಲಿಗೆ ಬರುವಂತೆ ಮಾಡಬೇಕು ಎಂದರು. ಮೂಡ ಅಧ್ಯಕ್ಷ ಸುರೇಶ್ ಬಲ್ಲಾಳ್, ಮೂಡ ಕಮಿಷನರ್ ಶ್ರೀಕಾಂತ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ರಾಧಾಕೃಷ್ಣ, ಅರುಣ್ ಕುವೆಲ್ಲೋ, ಕೆ.ಎಸ್.ಆರ್.ಟಿ.ಸಿ ನಿರ್ದೇಶಕ ಟಿ.ಕೆ.ಸುಧೀರ್, ಗುತ್ತಿಗೆದಾರ ಪ್ರಭಾಕರ್ ಯೆಯ್ಯಾಡಿ, ಮೋಹನ್ ಶೆಟ್ಟಿ, ನೆಲ್ಸನ್ ಮುಂತಾದವರಿದ್ದರು.