ಮಂಗಳೂರು: ಕಣ್ಣಗುಡ್ಡೆ ರಸ್ತೆ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ 5 ಕೋಟಿ ರೂಪಾಯಿ ಮಂಜೂರು ಮಾಡಿಸಿದ್ದು ಇದ್ದಕ್ಕೆ 15 ಕೋಟಿ ರೂಪಾಯಿ ಬೇಕಾಗುತ್ತದೆ ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದರು. ಕಣ್ಣಗುಡ್ಡೆ ಪ್ರದೇಶಕ್ಕೆ ಭೇಟಿ ನೀಡಿದ ನಂತರ ಅವರು ಸ್ಥಳೀಯರೊಂದಿಗೆ ಸಮಾಲೋಚಿಸಿದರು. ಈ ಪ್ರದೇಶದ ಜನರಿಂದ ರಸ್ತೆ ನಿರ್ಮಿಸಲು ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಬೇಡಿಕೆ ಸಲ್ಲಿಸುತ್ತಿದ್ದಾರೆ. ಇವರ ಬೇಡಿಕೆಯನ್ನು ಗಮನಿಸಿ ನಗರ ಪ್ರದೇಶಕ್ಕೆ ಅನುದಾನ ಬರದಿದ್ದರೂ ಸಿ ಆರ್ ಎಫ್ ನಿಂದ 5 ಕೋಟಿ ರೂಪಾಯಿ ಮಂಜೂರು ಮಾಡಿಸಿದ್ದೇನೆ. ಇನ್ನೂ ಇದಕ್ಕೆ 10 ಕೋಟಿ ರೂಪಾಯಿ ಬೇಕಾಗುತ್ತದೆ. ಜನರ ಸಹಕಾರ ಸಿಕ್ಕಿದರೆ ಆ ಹಣವನ್ನೂ ಮಂಜೂರು ಮಾಡಿಸುವುದಾಗಿ ಭರವಸೆ ನೀಡಿದರು.

ಈ ರಸ್ತೆ ನಿರ್ಮಾಣವಾದರೆ ಎರಡು ಹೆದ್ದಾರಿಗಳಿಗೆ ಸಂಪರ್ಕ ಕಲ್ಪಿಸುವ ಅವಕಾಶವಾಗುತ್ತದೆ. ಈ ಮುಂದಾಲೋಚನೆಯನ್ನು ಗಮನಿಸಿಯೇ ಯೋಜನೆ ಕೈಗೊಳ್ಳಲು ಮುಂದಾಗಿರುವುದಾಗಿ ತಿಳಿಸಿದರು. ಈ ಪ್ರದೇಶಕ್ಕೆ 10 ಮೀಟರ್ ಅಗಲದ ರಸ್ತೆ ಬೇಕಾಗುತ್ತದೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಕೂಡಾ ಬರೆದಿದ್ದೇನೆ. ಈ ರಸ್ತೆ ನಿರ್ಮಾಣವಾದರೆ ಮುಂದಿನ ದಿನಗಳಲ್ಲಿ ಈ ಪ್ರದೇಶಕ್ಕೆ ಭಾರೀ ಬೆಲೆ ಬರುತ್ತದೆ. ಸಾರ್ವಜನಿಕರ ಸಹಕಾರ ಸಿಕ್ಕಿದರೆ ಅತೀ ಅಗತ್ಯವಾದ ಸರಿಯಾದ ರಸ್ತೆ ನಿರ್ಮಾಣವಾಗತ್ತದೆ. ಒಳ್ಳೆಯ ರಸ್ತೆ ನಿರ್ಮಾಣ ಮಾಡುವುದು ಮುಖ್ಯ ಉದ್ದೇಶ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕಾರ್ಪೊರೇಟರ್ ಪ್ರಕಾಶ್ ಅಳಪೆ, ಡೆನ್ನೀಸ್ ಡಿಸಿಲ್ವಾ, ಎನ್ ಎಚ್ ಅಧಿಕಾರಿ ಅಬ್ದುಲ್ ರಹಮಾನ್, ಮಂಗಳೂರು ಪಾಲಿಕೆ ಅಧಿಕಾರಿ ಶ್ರೀನಿವಾಸ್, ಯಶವಂತ, ಕೆ.ಎಸ್.ಆರ್.ಟಿಸಿ ನಿರ್ದೇಶಕ ಟಿ.ಕೆ.ಸುಧೀರ್, ಸ್ಥಳೀಯರಾದ ಹೆನ್ರೀ ಡಿಸೋಜ, ಅರುಣ್ ಮುಂತಾದವರು ಉಪಸ್ಥಿತರಿದ್ದರು.