ಕಂದಾಯ ಅದಾಲತ್ ಉದ್ಘಾಟನೆ

ಮಂಗಳೂರು : ಕಂದಾಯ ಇಲಾಖೆಯಲ್ಲಿ ಪಹಣಿ ಪತ್ರಗಳು, ದಾಖಲೆಗಳು, ಸರ್ವೇ ಇಲಾಖೆಯ ದಾಖಲೆಗಳು ಇಲ್ಲದಿದ್ದರೆ ಸಂಬಂಧ ಪಟ್ಟ ಅಧಿಕಾರಿಗಳೇ ಹೊಣೆಯಾಗಬೇಕು. ತಪ್ಪಿತಸ್ಥರ ವಿರುದ್ಧ ತನಿಖೆ ಮಾಡಿ ಕಾನೂನು ಕ್ರಮ ಕೈಗೊಳ್ಳಿ ಎಂದು ಶಾಸಕ ಜೆ.ಆರ್.ಲೋಬೊ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದರು.

ಅವರು ಇಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಭಾ ಭವನದಲ್ಲಿ ಮಂಗಳೂರು ಅತ್ತಾವರ ಮತ್ತು ತೋಟ ಗ್ರಾಮಗಳ ಕಂದಾಯ ಅದಾಲತ್ ಉದ್ಘಾಟಿಸಿ ಮಾತನಾಡುತ್ತಿದ್ದರು.

ರೆಕಾರ್ಡ್ ರೂಮಿನಲ್ಲಿ ಇದ್ದ ದಾಖಲೆಗಳಿಲ್ಲ ಎಂದಾದರೆ ಅದಕ್ಕೇ ಅಲ್ಲಿದ್ದ ಅಧಿಕಾರಿಗಳೇ ಹೊಣೆಯಾಗಬೇಕು. ಇಲ್ಲವೆಂದು ಹೇಳಲು ಕಾರಣವಿಲ್ಲ. ಕೂಡಲೇ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಜರಗಿಸಿ ಎಂದು ಹೇಳಿದರು.

ಹಳ್ಳಿ ಹಳ್ಳಿಗಳಲ್ಲಿ ಅದಾಲತ್ ಮಾಡಿ. ಒಂದು ದಿನಕ್ಕೇ ಎರಡು ಹಳ್ಳಿಯನ್ನು ಆಯ್ಕೆ ಮಾಡಿ. ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆ ಇದ್ದರೆ ಗ್ರಾಮಸ್ಥರು ಬಂದು ಸ್ಥಳಲ್ಲೇ ಸಮಸ್ಯೆ ಪರಿಹರಿಸಿಕೊಳ್ಳಲು ನೆರವಾಗುತ್ತದೆ ಎಂದರಲ್ಲದೇ ಹೀಗೆ ಮಾಡಿದರೆ ಹೆಚ್ಚು ಪ್ರಯೋಜನವಾಗುತ್ತದೆ ಎಂದರು.

ಕಂದಾಯ ದಾಖಲೆಗಳು ಸರಿಯಾಗಿದ್ದರೆ ನೆಮ್ಮದಿ ಸಿಗುತ್ತದೆ. ಸುಖವಾಗಿ ಬದುಕುತ್ತಾರೆ. ದಾಖಲೆ ಸರಿಯಿಲ್ಲದಿದ್ದರೆ ಯಾವಾಗಲು ಮಾನಸಿಕವಾಗಿ ಕಾಡುತ್ತಿರುತ್ತದೆ. ಪರಿಣಾಮವಾಗಿ ಶಾಂತಿ, ನೆಮ್ಮದಿ ಕೆಡುತ್ತದೆ ಎಂದರು.

ಕಂದಾಯ ಅಧಿಕಾರಿಗಳು, ಗ್ರಾಮ ಕರಣಿಕರು ಅದಾಲತ್ ನಲ್ಲಿ ಭಾಗವಹಿಸಿ ಜನರ ಸಮಸೆಗಳನ್ನು ಇಲ್ಲೇ ಪರಿಹರಿಸುತ್ತಾರೆ. ಅಥವಾ 15 ದಿನಗಳಿಂದ 30 ದಿನಗಳ ಒಳಗೆ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತಾರೆ ಎಂದು ಶಾಸಕ ಜೆ.ಆರ್.ಲೋಬೊ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಶಾಸಕರು ವಿಧವಾ ಪಿಂಚಣಿ, ಅಂಗ ವಿಕಲ ವೇತನ, ಸಂಧಾ ಸುರಕ್ಷಾ, ಮನಸ್ವಿನಿ ಮುಂತಾದ ಪಿಂಚಣಿ ಪತ್ರಗಳನ್ನು ಸಂಬಂಧ ಪಟ್ಟವರಿಗೆ ವಿತರಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ ಮಹದೇವ ಅವರು ರೆಕಾರ್ಡ್ ರೂಮಿಗೆ ಸಿಸಿಟಿವಿ ಹಾಕಿಸುವ ಚಿಂತನೆ ಇದೆ ಎಂದರಲ್ಲದೆ ತಹಶೀಲ್ದಾರ್ ಕಚೇರಿ ಮತ್ತು ರೆಕಾರ್ಡ್ ರೂಮನ್ನು ಒಂದುಗೂಡಿಸುವಂತೆ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.

ಸಮಾರಂಭದಲ್ಲಿ ಕಾರ್ಪೊರೇಟರ್ ಗಳಾದ ಕವಿತಾ, ರತಿಕಲಾ,ಲತೀಫ್ ಉಪಸ್ಥಿತರಿದ್ದರು.