ಮಂಗಳೂರು: ಮಂಗಳೂರು ಹಳೇ ಬಂದರು ಅಧೋಗತಿ ಪೀಡಿತವಾಗಿದ್ದು ಪೂರ್ಣ ಪ್ರಮಾಣದ ಬಳಕೆಯಾಗದೆ ಇದ್ದೂ ಇಲ್ಲದ ಸ್ಥಿತಿಯನ್ನು ಎದುರಿಸುತ್ತಿದ್ದು ಉನ್ನತ ಮಟ್ಟದ ನಿಯೋಗವನ್ನು ಲಕ್ಷದ್ವೀಪಕ್ಕೆ ಕೊಂಡೊಯ್ದು ಪರ್ಯಾಯ ವ್ಯವಸ್ಥೆ ಮಾಡಬೇಕಾಗಿದೆ ಎಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಒಂದೇ ಒಂದು ಹಡಗು ಸಹಾ ಈ ಬಂದರಿಗೆ ಬಾರದೇ ಇಲ್ಲಿನ ಉದ್ಯೋಗಿಗಳು ನಿರುದ್ಯೋಗಿಗಳಾಗಿದ್ದಾರೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಉಪಯುಕ್ತ ಬಂದರು ಕೂಡಾ ನಿರುಪಯುಕ್ತವಾಗುವ ಅಪಾಯವಾಗಲಿದೆ ಎಂದು ಎಚ್ಚರಿಸಿದರು.

ಎರಡು ಅಪಘಾತಗಳು ಸಂಭವಿಸಿ ಬದುಕಿಸುವ ಅವಕಾಶವಿದ್ದರೂ ಬದುಕಿಸಲಾಗದೆ ಇರಬೇಕಾಯಿತು.ರಕ್ಷಣಾ ವ್ಯವಸ್ಥೆಯನ್ನು ಒದಗಿಸಬೇಕು. ಹಡಗು ಬರಬೇಕಾದರೆ ಪೂರ್ಣಪ್ರಮಾಣದ ನೀರು ಇರಬೇಕು. ಕನಿಷ್ಠ ಈ ವ್ಯವಸ್ಥೆಯನ್ನು ಕೂಡಾ ಮಾಡುವಂತೆ ಒತ್ತಾಯಿಸಿದರು.

70 ಕೋಟಿ ವೆಚ್ಚದಲ್ಲಿ ಲಕ್ಷದ್ವೀಪದ ಹಡಗುಗಳಿಗೆ ಪ್ರತ್ಯೇಕ ತಂಗುದಾಣ ನಿರ್ಮಿಸುವ ಹಾಗೂ ಅದಕ್ಕೇ ಬೇಕಾಗಿರುವಂತ ಚಾನೆಲ್ ನಿರ್ಮಿಸಲು ಯೋಜನೆಯು ಈಗಾಗಲೇ ಮಂಜೂರಾಗಿದ್ದು ಅನುಷ್ಠಾನಕ್ಕೆ ಬಾಕಿ ಇದೆ. ಮೂರನೇ ಹಂತದ ಮೀನುಗಾರಿಕಾ ಬಂದರು ಕಾಮಗಾರಿಗೆ 90 ಕೋಟಿ ಬೇಕಾಗಿದ್ದು ಈಗಾಗಲೇ 54 ಕೋಟಿ ಬಿಡುಗಡೆಯಾಗಿದ್ದು ಉಳಿಕೆ ಹಣವನ್ನು ಬಿಡುಗಡೆ ಮಾಡಲು ಸರ್ಕಾರವನ್ನು ಕೋರಲಾಗಿದೆ.ರಾಜ್ಯ ಮತ್ತು ಕೇಂದ್ರ ಸರ್ಕಾರ 40:60 ಅನುಪಾತ ಇದ್ದು ಈಗಾಗಲೇ ವೆಚ್ಚ ಮಾಡಿದ 35 ಕೋಟಿ ರೂಪಾಯಿ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿರುವುದರಿಂದ ಕಾಮಗಾರಿ ಕುಂಟುತ್ತಾ ಇದೆ ಎಂದು ವಿವರಿಸಿದರು.

ಅಳಿವೆ ಬಾಗಿಲಿನ ಹೂಳೆತ್ತುವಿಕೆಗೆ 100 ಲಕ್ಷ ಮಂಜೂರಾಗಿದೆ.200 ಮೀ ಉದ್ದದ ತಡೆಗೋಡೆ ನಿರ್ಮಾಣಕ್ಕೆ200 ಕೋಟಿ ರೂಪಾಯಿ ಮಂಜೂರಾಗಿದೆ.ತೋಟ ಬೆಂಗ್ರೆಯಲ್ಲಿ ಜೆಟ್ಟಿ ನಿರ್ಮಾಣಕ್ಕೆ 30 ಲಕ್ಷ ರೂಪಾಯಿ ಮಂಜೂರಾಗಿದೆ. ಜೆಟ್ಟಿಯ ಮೇಲ್ಚಾವಣಿ ಮತ್ತು ಇತರ ಕಾಮಗಾರಿಗಳಿಗೆ 21 ಲಕ್ಷ ರೂಪಾಯಿ ಮಂಜೂರಾಗಿದೆ. ನಾಡ ದೋಣಿ ರೇವು ನಿರ್ಮಾಣಕ್ಕೆ 39 ಲಕ್ಷ ರೂಪಾಯಿ ಮಂಜೂರಾಗಿದೆ. ಮಹಿಳಾ ಮೀನುಗಾರರಿಗೆ ಶೆಡ್ ನಿರ್ಮಾಣಕ್ಕೆ 47 ಲಕ್ಷ ರೂಪಾಯಿ ಮಂಜೂರಾಗಿದೆ ಎಂದೂ ಶಾಸಕ ಜೆ.ಆರ್.ಲೋಬೊ ತಿಳಿಸಿದರು.

ಮಂಗಳೂರು ಹಳೆ ಬಂದರು ಭೂಮಿಯನ್ನು ಯಾರ ಸ್ವಾಧೀನದಲ್ಲಿದೆ, ಎಷ್ಟು ಅವಧಿಯಿಂದ ಇದೆ, ಎಷ್ಟು ಮಂದಿ ಅನಧಿಕೃತವಾಗಿ ಸ್ವಾಧೀನ ಇಟ್ಟುಕೊಂಡಿದ್ದಾರೆ, ಎಷ್ಟುಮಂದಿ ಬಂದರು ಇಲಾಖೆಗೆ ನೀಡಬೇಕಾದಂತಹ ಹಣವನ್ನು ಬಾಕಿ ಇಟ್ಟುಕೊಂಡಿದ್ದಾರೆ ಎಂಬ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ ಎಂದರು.

ಬಂದರಿನಲ್ಲಿರುವ ಸರಕು ಮೀನು ಮಾರಾಟ ಮಾರುಕಟ್ಟೆ, ಒಣ ಮೀನು ಸರಕು ಮಾರಾಟ ಮಾರುಕಟ್ಟೆ, ಸ್ಟೇಟ್ ಬಾಂಕ್ ಬಳಿ ಇರುವ ಮೀನು ಮಾರುಕಟ್ಟೆ ಅಭಿವೃದ್ಧಿ ಪಡಿಸಲು ಎನ್ ಎಫ್ ಡಿಬಿಯಿಂದ ಆರ್ಥಿಕ ಸಹಾಯ ಪಡೆದು ಉಳಿಕೆಹಣವನ್ನು ಸರ್ಕಾರದಿಂದ ಯಾ ಇನ್ನಿತರ ಇಲಾಖೆಗಳಿಂದ ಪಡೆಯಲು ಕ್ರಮ ತೆಗೆದುಕೊಳ್ಳಲಾಗುವುದು ಎಂದೂ ಶಾಸಕ ಜೆ.ಆರ್.ಲೋಬೊ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಶ್ವಾಸ್ ದಾಸ್, ಕಾರ್ಪೊರೇಟರ್ ಗಳಾದ ಶೈಲಜಾ, ಪ್ರಕಾಶ್ ಅಳಪೆ,ಕೇಶವ ಮರೋಳಿ,ಟಿ.ಕೆ ಸುಧೀರ್, ಶೋಭಾ ಕೇಶವ, ನೀರಜ್ ಪಾಲ್,ಡೆನ್ನಿಸ್ ಡಿಸಿಲ್ವಾ, ಮೋಹನ್ ಮೆಂಡನ್, ನೆಲ್ಸನ್ ಮೊಂತೇರೊ ಮುಂತಾದವರು ಉಪಸ್ಥಿತರಿದ್ದರು.