ಮಂಗಳೂರು: ಮಂಗಳೂರು ನಗರದಲ್ಲಿ ಅಂಡರ್ ಗ್ರೌಂಡ್ ಕೇಬಲ್ ಅಳವಡಿಸುವ ಮೂಲಕ ವಿದ್ಯುತ್ ತಂತಿಗಳು ತೂಗಾಡುವುದನ್ನು ತಪ್ಪಿಸಿ ನಗರವನ್ನು ಸುಂದರವನ್ನಾಗಿ ಮಾಡಲು 50 ಕೋಟಿ ರೂಪಾಯಿ ಅನುದಾನವನ್ನು ಪಡೆಯಲಾಗುತ್ತಿದೆ ಎಂದು ಶಾಸಕ ಜೆ.ಆರ್.ಲೋಬೊ ಅವರು ತಿಳಿಸಿದರು.

ಅವರು ಮಲ್ಲಿಕಟ್ಟೆಯ ತಮ್ಮ ಕಚೇರಿಯಲ್ಲಿ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಮೆಸ್ಕಾಂ ಸಲಹಾ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಮಂಗಳೂರಿಗೆ ಪ್ರಾಯೋಗಿಕವಾಗಿ ಎ.ಬಿ.ಶೆಟ್ಟಿ ವೃತ್ತದಿಂದ ಕಂಕನಾಡಿ ಕರಾವಳಿ ಸರ್ಕಲ್ ವರೆಗೆ ಅಂಡರ್ ಗ್ರೌಂಡ್ ಕೇಬಲ ಅಳವಡಿಸುವುವ ಕೆಲಸ ಬಹುತೇಕ ಮುಕ್ತಾಯದ ಹಂತದಲ್ಲಿದೆ. ಇದಕ್ಕಾಗಿ 10 ಕೋಟಿ ರೂಪಾಯಿಯನ್ನು ಖರ್ಚು ಮಾಡಲಾಗುತ್ತಿದೆ. ಈ ಕಾಮಗಾರಿಯನ್ನು ಆದಷ್ಟು ಬೇಗನೇ ಮುಗಿಸಿ ಮುಂದಿನ ನವೆಂಬರ್ ತಿಂಗಳಲ್ಲಿ ಇಂಧನ ಖಾತೆ ಸಚಿವರಿಂದ ಈ ಕಾಮಗಾರಿಯನ್ನು ಉದ್ಘಾಟನೆ ಮಾಡಿಸಲಾಗುವುದು ಎಂದರು.

ಸಚಿವರು ಬಂದಾಗ ಮಂಗಳೂರಲ್ಲಿ ಅಂಡರ್ ಗ್ರೌಂಡ್ ಕೇಬಲ್ ಅಳವಡಿಸಲು ಹೆಚ್ಚಿನ ಅನುದಾನವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದ ಅವರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಮಂಗಳೂರನ್ನು ಆಧುನೀಕರಣಗೊಳಿಸಲು ಸುಮಾರು 300 ಕೋಟಿ ರೂಪಾಯಿ ಪಡೆಯಲು ಪ್ರಯತ್ನಿಸಲಾಗುವುದು ಎಂದರು. ನೆಹರೂ ಮೈದಾನ ಮತ್ತು ಉರ್ವಾ ದಲ್ಲಿ ವಿದ್ಯುತ್ ಕೇಂದ್ರ ಸ್ಥಾಪಿಸಲು ಭೂಮಿಯ ಅವಶ್ಯಕತೆಯಿದ್ದು ಈ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ. ಈಗಾಗಲೇ ಉನ್ನತಮಟ್ಟದ ಅಧಿಕಾರಿಗಳ ಜೊತೆ ಮಾತುಕತೆ ಮಾಡಲಾಗಿದೆ. ಭೂಮಿ ಆದಷ್ಟು ಬೇಗನೆ ಸಿಗಲಿದ್ದು ಅಲ್ಲೂ ಶಂಕುಸ್ಥಾಪನೆ ಮಾಡಲಾಗುವುದು ಎಂದು ಹೇಳಿದರು.

ಇಲಾಖೆಯಲ್ಲಿ ದಾರಿ ದೀಪ ಆನ- ಆಫ್ ಮಾಡಲು ಆಧುನಿಕ ಬಾಕ್ಸ್ ಹಾಕಬೇಕು. ಅದಕ್ಕಾಗಿ 719 ಬಾಕ್ಸ್ ಖರೀದಿಸಬೇಕಾಗಿದೆ. ಸುಮಾರು 12 ಲಕ್ಷ ರೂಪಾಯಿಯನ್ನು ಖರ್ಚು ಮಾಡಲಾಗುತ್ತಿದೆ. ಈ ಬಾಕ್ಸ್ ಗಳನ್ನು ಖರೀದಿಸಲು ಈಗಾಗಲೇ ಟೆಂಡರ್ ಕರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದಾಗ ಮೆಸ್ಕಾಂ ಸಲಹಾ ಸಮಿತಿ ಸಭೆ ನಡೆದು 6 ತಿಂಗಳಾಯಿತು. ಇನ್ನೂ ಟೆಂಡರ್ ಕರೆಯಲಾಗುತ್ತಿದೆಯೇ, ಯಾಕಿಷ್ಟು ವಿಳಂಭವಾಗಿದೆ ಎಂದು ಶಾಸಕ ಜೆ.ಆರ್. ಲೋಬೊ ಅಸಮಾಧಾನ ವ್ಯಕ್ತಪಡಿಸಿ ಯಾವುದೇ ಕಾರಣಕ್ಕೂ ವಿಳಂಭವಾಗದಂತೆ ನೊಡಿಕೊಳ್ಳುವಂತೆ ಸಲಹೆ ಮಾಡಿದರು.

ಸಭೆಯಲ್ಲಿ ಮೆಸ್ಕಾಂ ಎಕ್ಸಿಕೂಟಿವ್ ಇಂಜಿನಿಯರ್ ಮಂಜಪ್ಪ, ಸಲಹಾ ಸಮಿತಿ ಸದಸ್ಯರಾದ ಮೋಹನ್ ಮೆಂಡನ್, ದುರ್ಗಾ ಪ್ರಸಾದ್ ಹಾಗೂ ಮೆಸ್ಕಾಂ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.