ಮಂಗಳೂರು: ಸ್ಟೇಟ್ ಬ್ಯಾಂಕ್ ಬಳಿ ಹಸಿ ಮೀನು ಮಾರಾಟಗಾರರ ಬೇಡಿಕೆಗೆ ಸ್ಪಂದಿಸಿ ಶಾಸಕ ಜೆ.ಆರ್.ಲೋಬೊ ಅವರು ವಿವರವಾದ ಮನವಿಯನ್ನು ಕೊಟ್ಟರೆ ಸರ್ಕಾರದ ಜೊತೆಯಲ್ಲಿ ಮಾತಾನಾಡಿ ಅಗತ್ಯವಾದ ಎಲ್ಲಾ ಸೌಕರ್ಯಗಳನ್ನು ಮಾಡಿಸಿ ಕೊಡುವುದಾಗಿ ಭರವಸೆ ಕೊಟ್ಟರು.

ಸೋಮವಾರ ಚೇತನ್ ಬೆಂಗ್ರೆ ನೇತೃತ್ವದಲ್ಲಿ ಮೀನು ಮಾರಾಟಗಾರರು ಶಾಸಕರನ್ನು ಭೇಟಿ ಮಾಡಿ ತಮ್ಮ ಅಹವಾಲು ಹೇಳಿಕೊಂಡರು.

ನಮಗೆ ಉಳಿಕೆ ಮೀನು ಇಡಲು ವ್ಯವಸ್ಥೆ ಬೇಕು, ವಿಶ್ರಾಂತಿ ಗೃಹ ಇರಬೇಕು, ಶೌಚಾಲಯದ ವ್ಯವಸ್ಥೆ , ಮೇಲ್ಚಾವಣಿ ದುರಸ್ಥಿ ಮುಂತಾದ ಬೇಡಿಕಗಳನ್ನು ಮುಂದಿಟ್ಟರು. ರಾತ್ರಿ ಹೊತ್ತು ಮೀನು ಇಡಲು ತೊಂದರೆಯಾಗುತ್ತಿದೆ. ಇಲಿಗಳ ಉಪಟಳವಿದೆ. ಇನ್ನು ರಾತ್ರಿ ಹೊತ್ತಲ್ಲಿ ಕಳ್ಳರ ಕಾಟವಿದೆ. ಕೂಡಿಟ್ಟ ಮೀನುಗಳ ಕಳವಾಗುತ್ತದೆ ಎಂದು ವಿವರಿಸಿದರು.

ಶಾಸಕ ಜೆ.ಆರ್.ಲೋಬೊ ಅವರು ಅವರ ಬೇಡಿಕೆಗಳನ್ನು ಆಲಿಸಿದ ನಂತರ ಇವೆಲ್ಲವನ್ನೂ ಮಾಡಿಕೊಡಲು ಸಮಸ್ಯೆ ಇಲ್ಲ. ವಿವರವಾಗಿ ನಿಮ್ಮ ಸಮಸ್ಯೆಗಳನ್ನು ಲಿಖಿತವಾಗಿ ಕೊಟ್ಟರೆ ಅವುಗಳನ್ನು ಸರ್ಕಾರದ ಮುಂದೆ ಇಟ್ಟು ಮಂಜುರಾತಿ ಮಾಡಿಸಿಕೊಡುವುದಾಗಿ ತಿಳಿಸಿದರು. ಮೀನುಗಾರರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸುತ್ತದೆ. ಜೊತೆಗೆ ಹಣಕಾಸಿನ ಕೊರತೆ ಕೂಡಾ ಇರುವುದಿಲ್ಲವೆಂದರು.

ಇವಿಷ್ಟೆ ಅಲ್ಲದೆ ಬೇರೆ ಅಗತ್ಯವಾದ ಸೇವಾ ಚಟುವಟಿಕೆಗಳನ್ನು ಕೂಡಾ ಒದಗಿಸುವುದಾಗಿಯೂ ಶಾಸಕರು ಭರವಸೆ ನೀಡಿದರು. ಮಾತುಕತೆ ವೇಳೆ ಮಾರಾಟಗಾರರ ಪದಾಧಿಕಾರಿಗಳಿದ್ದರು.