ಮಂಗಳೂರು: ನಂದಿಗುಡ್ಡೆ ಸ್ಮಶಾನಕ್ಕೆ 74 ಲಕ್ಷ ರೂಪಾಯಿ ಮಂಜೂರಾಗಿದ್ದು ಇದರ ಸರ್ವಾಂಗೀಣ ಅಭಿವೃದ್ಧಿಯ ಕುರಿತು ನಾಳೆ ನಂದಿಗುಡ್ಡೆ ಸ್ಮಶಾನಕ್ಕೆ ನಗರಪಾಲಿಕೆ ಅಧಿಕಾರಿಗಳ ಜೊತೆ ಭೇಟಿ ಮಾಡಿ ಯಾವೆಲ್ಲಾ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂಬುದನ್ನು ನಿರ್ಧರಿಸಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದರು.

ಅವರು ಇಂದು ತಮ್ಮ ಕಚೇರಿಯಲ್ಲಿ ನಂದಿಗುಡ್ಡೆ ಸ್ಮಶಾನಕ್ಕೆ ಸಂಬಂಧಿಸಿ ಚರ್ಚೆ ನಡಿಸಿ ಈ ನಿರ್ಧಾರ ತೆಗೆದುಕೊಂಡರು.
ಬೇರೆ ಬೇರೆ ಮೂಲಗಳಿಂದ ಹಣಕಾಸು ಬಂದಿದ್ದು ಈ ಹಣವನ್ನು ಯಾವೆಲ್ಲಾ ಅಭಿವೃದ್ಧಿ ಕೆಲಸಗಳಿಗೆ ವಿನಿಯೋಗಿಸಬಹುದು ಎಂಬ ಬಗ್ಗೆ ನಿರ್ಧಾರವಾಗಬೇಕಿದೆ. ಕ್ಲೀನಿಂಗ್, ಗೋಡೆ ರಿಪೇರಿ, ಕೆಲಸಗಳನ್ನು ಮಾಡಬೇಕು ಎಂದು ನಗರ ಪಾಲಿಕೆ ಇಂಜಿನಿಯರ್ ಲಿಂಗೇಗೌಡ ತಿಳಿಸಿದಾಗ ಶಾಸಕ ಲೋಬೊ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಒಮ್ಮತದ ನಿರ್ಧಾರ ತೆಗೆದುಕೊಳ್ಳೋಣ ಎಂದರು.

ಉಸ್ತುವಾರಿ ಸಮಿತಿಯನ್ನು ಅಧಿಕೃತವಾಗಿ ಮಾಡಬೇಕಿದೆ. ಈಗ ಕೆಲವರು ಮಾತ್ರ ಸಮಿತಿ ಮಾಡಿಕೊಂಡಿದ್ದಾರೆ. ಸ್ಥಳೀಯ ನಗರಪಾಲಿಕೆ ಸದಸ್ಯರೂ ಇರಬೇಕು. ಇದು ಕಾಯಂ ಸಮಿತಿಯಾಗಿ ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಕೆಲಸ ನಿರ್ವಹಿಸಬೇಕು ಎಂದು ನುಡಿದ ಶಾಸಕ ಜೆ.ಆರ್.ಲೋಬೊ ಅವರು ಈ ಸ್ಮಶಾನವನ್ನು ಸ್ವಚ್ಛಗೊಳಿಸುವ ಅಗತ್ಯವಿದೆ ಎಂದರು.

2 ವರ್ಷದಿಂದ ಅಲ್ಲಿರುವ ಸಿಬ್ಬಂಧಿಗೆ ಸಂಬಳ ಕೊಡದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಲೋಬೊ ಅವರು ಅಧಿಕಾರುಗಳು ನೀಡಿದ ಉತ್ತರಕ್ಕೆ ಅಸಮಾಧಾನಗೊಂಡು ಅಧಿಕೃತವಾಗಿ ವ್ಯಕ್ತಿಯನ್ನು ನೇಮಕ ಮಾಡಿಕೊಳ್ಳದಿದ್ದರೆ ಯಾವ ಆಧಾರದಲ್ಲಿ ಕೆಲಸ ಮಾಡಿಸಿಕೊಂಡಿರಿ, ಸಂಬಳವನ್ನು ಯಾಕೆ ಕೊಡಲಿಲ್ಲ ಎಂದು ಪ್ರಶ್ನಿಸಿದರು.

ನಾಳೆ ಬೆಳಿಗ್ಗೆ 9 ಗಂಟೆಗೆ ಅಧಿಕೃತವಾಗಿ ಭೇಟಿ ನೀಡಿ ಇದನ್ನು ಕೂಲಂಕಷವಾಗಿ ಅಧ್ಯಯನ ಮಾಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳೋಣ ಎಂದರು.

ನಾಳೆಯ ಭೇಟಿ ವೇಳೆ ಶಾಸಕರು, ನಗರಪಾಲಿಕೆ ಆಯುಕ್ತರು, ಸಂಬಂಧಿಸಿದ ಪಾಲಿಕೆ ಸದಸ್ಯರು ಪಾಲ್ಗೊಳ್ಳಲಿದ್ದಾರೆ.